ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಿದ್ದಾರೆ.
ಜಯನಗರದ ಅಶೋಕ್ ಪಿಲ್ಲರ್ ಬಳಿ ಸಾಗುತ್ತಿದ್ದ ವೋಲ್ವೋ ಬಸ್ ಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ. ಬಸ್ ಮೆಜೆಸ್ಟಿಕ್‍ನಿಂದ ಜಯನಗರದ ಕಡೆ ಹೋಗುತ್ತಿತ್ತು. ಘಟನೆಯಲ್ಲಿ ಬಸ್ ಚಾಲಕನ ಬಲಭಾಗದಲ್ಲಿಯ ಕಿಟಕಿಯ ಗಾಜು ಪುಡಿ ಪುಡಿಯಾಗಿದೆ. ಬಿಎಂಟಿಸಿ ಮುನ್ನೇಚ್ಚರಿಕೆ ಕ್ರಮವಾಗಿ ಪ್ರತಿಭಟನೆ ಮತ್ತು ಮೆರವಣಿಗೆ ಸಾಗುವ ಮಾರ್ಗದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿತ್ತು. ಡಿ.ಕೆ.ಶಿವಕುಮಾರ್ ಬಂಧನದ ವೇಳೆ ಕಿಡಿಗೇಡಿಗಳು ಬಸ್ ಗಳ ಕಲ್ಲು ಹೊಡೆದಿದ್ದರು.
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಬಂಧನ ಮಾಡಿರುವುದು ಒಕ್ಕಲಿಗ ಸಮುದಾಯವನ್ನು ರೊಚ್ಚಿಗಬ್ಬಿಸಿದೆ. ಕನಕಪುರದ ಬಂಡೆಯ ಬಂಧನ ಖಂಡಿಸಿ ಇಂದು ಬೆಂಗಳೂರಲ್ಲಿ ಒಕ್ಕಲಿಗರ ಸಂಘದಿಂದ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ. ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಗ್ರೌಂಡ್‍ನಿಂದ ಈ ರ್ಯಾಲಿ ಆರಂಭಗೊಂಡು, ಫ್ರೀಡಂಪಾರ್ಕ್ ನಲ್ಲಿ ಅಂತ್ಯಗೊಂಡಿದೆ. 30 ಸಾವಿರಕ್ಕೂ ಹೆಚ್ಚು ಜನ್ರು ಈ ಮೆರವಣಿಗೆಯಲ್ಲಿ ಭಾಗಿಯಾಗುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.