Connect with us

ಅಪಹರಿಸಿ ಸ್ಕಾರ್ಪಿಯೋ ಕಾರಿನಲ್ಲಿ ಹೊತ್ತೊಯ್ದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಅಪಹರಿಸಿ ಸ್ಕಾರ್ಪಿಯೋ ಕಾರಿನಲ್ಲಿ ಹೊತ್ತೊಯ್ದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಯುವಕನೊರ್ವನನ್ನು ನಾಲ್ವರು ಕಿಡಿಗೇಡಿಗಳು ಅಪಹರಿಸಿ ಕಾರಿನಲ್ಲಿ ಹೊತ್ತೊಯ್ದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ನಡೆದಿದೆ.

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ. ಬೇಗೂರು ಗ್ರಾಮ ಸಮೀಪದ ಆನಂದನಗರ ನಿವಾಸಿ ರಾಜು (26) ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಬೇಗೂರು ಗ್ರಾಮದಲ್ಲಿರುವ ಕೋಳಿ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ಏಕಾಏಕಿ ಬಂದ ನಾಲ್ವರು ಕಿಡಿಗೇಡಿಗಳು, ರಾಜು ಅವರನ್ನು ಅಪಹರಿಸಿ ರಾಮನಗರ ಜಿಲ್ಲೆಯ ಕಡೆ ಹೊತ್ತೊಯ್ದು ದಾರಿಯುದ್ದಕ್ಕೂ ರಾಡಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

ಹಲ್ಲೆ ನಡೆಸಿದ ಬಳಿಕ ರಾಜುವನ್ನು ಕಿಡಿಗೇಡಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊಂಡೆಕೊಪ್ಪದ ಕೆರೆಯ ರಸ್ತೆಯ ಬದಿಯಲ್ಲಿ ಕಸದ ರೀತಿಯಲ್ಲಿ ಬಿಸಾಡಿ ಸ್ಥಳದಿಂದ ತಲೆ ಮರೆಸಿಕೊಂಡಿದ್ದಾರೆ.

ತೀವ್ರವಾಗಿ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ರಸ್ತೆ ಬದಿಯಲ್ಲಿ ಒದ್ದಾಡುತ್ತಾ ಬಿದ್ದಿದ್ದ ರಾಜು ಸ್ಥಳೀಯರ ಸಹಾಯದಿಂದ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ರಾಜು ಮುಖದ ಕೆಲ ಭಾಗದ ಮೂಳೆ ಮುರಿದಿದ್ದು, ಸ್ಥಳೀಯರು ಮತ್ತು ಸ್ನೇಹಿತರು ನೆಲಮಂಗಲ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.