ಯಾದಗಿರಿ: ಕಿಡಿಗೇಡಿಗಳು ಗುಡ್ಡಕ್ಕೆ ಬೆಂಕಿ ಹಂಚಿದ ಪರಿಣಾಮ ಹೊತ್ತಿ ಉರಿದ ಘಟನೆ ಜಿಲ್ಲೆಯ ನಾಯ್ಕಲ್ ಗ್ರಾಮದಲ್ಲಿ ನಡೆದಿದೆ.
ಕಿಡಿಗೇಡಿಗಳು ಗುಡ್ಡದ ಮೇಲಿರುವ ಒಣಗಿದ ಮೇವಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪರಿಣಾಮ ಗುಡ್ಡದ ಸುತ್ತಲೂ ಬೆಂಕಿ ಆವರಿಸಿದ್ದರಿಂದ ಗುಡ್ಡದ ಕೆಳ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಬೆಂಕಿ ಬಿದ್ದಿರುವ ವಿಚಾರ ತಿಳಿದಿದೆ. ಇದರಿಂದ ಗಾಬರಿಗೊಂಡು ಅವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಅರಣ್ಯಾ ಇಲಾಖೆ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇಸಿಗೆ ಇರುವ ಹಿನ್ನೆಲೆಯಲ್ಲಿ ಗುಡ್ಡದ ಮೇಲಿರುವ ಒಣಗಿದ ಮೇವಿಗೆ ಬೆಂಕಿ ಹತ್ತಿರುವುದರಿಂದ ಬೆಂಕಿಯ ಕೆನ್ನಾಲಿಗೆ ಗುಡ್ಡದ ಸುತ್ತಲೂ ವ್ಯಾಪಿಸಿದೆ. ಇದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವಡಗೇರಾ ಪಿಎಸ್‍ಐ ಮಹದೇವಪ್ಪ ದಿಡ್ಡಿಮನಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.