ಯಾದಗಿರಿ: ಶಾಸಕ ರಾಜುಗೌಡ ಹುಟ್ಟುಹಬ್ಬದ ನಿಮಿತ್ತ ಬ್ಯಾನರ್ ಮತ್ತು ಪೋಸ್ಟರ್ ಹಾಕಲು ತೆರಳುತ್ತಿದ್ದ ವಾಹನದ ಮೇಲೆ ಕೆಲ ಕಿಡಿಗೇಡಿಗಳು ಕಲ್ಲುಗಳಿಂದ ಹಲ್ಲೆ ನಡೆಸುವ ಮೂಲಕ ರಾಜುಗೌಡರ ಭಾವಚಿತ್ರವುಳ್ಳ ಬ್ಯಾನರ್ ಗಳನ್ನು ಹರಿದು, ವಾಹನವನ್ನು ಜಖಂಗೊಳಿಸಿದ ಘಟನೆ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ.
ಕಳೆದ ರಾತ್ರಿ ಶಾಸಕರಿಗೆ ಶುಭ ಕೋರಿದ ಪೋಸ್ಟರ್ ಮತ್ತು ಬ್ಯಾನರ್ ಗಳನ್ನ ನಗರದ ಹಲವೆಡೆ ಹಚ್ಚಲು ಗಾಂಧಿ ವೃತ್ತದ ಬಳಿ ತೆರಳುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಕೆಲ ಕಾಂಗ್ರೆಸ್ ಕಾರ್ಯಕರ್ತರೇ ಈ ಕೆಲಸ ಮಾಡಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬಂದಿವೆ. ಏಕಾಏಕಿ ಕಲ್ಲು ತೂರಾಟ ಮಾಡಿದ್ದರಿಂದ ವಾಹನದ ಗ್ಲಾಸ್ ಪುಡಿಪುಡಿಯಾಗಿದ್ದು, ಪೋಸ್ಟರ್ ಮತ್ತು ಬ್ಯಾನರ್ ಗಳು ಚೆಲ್ಲಾಪಿಲ್ಲಿಯಾಗಿದೆ. ಸದ್ಯಕ್ಕೆ ಸ್ಥಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
Advertisement
Advertisement
ಕಳೆದ ತಿಂಗಳಷ್ಟೇ ಕ್ಷೇತ್ರದ ಕೊಡೆಕಲ್ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರ ಲಗತ್ತಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಹಲ್ಲೆಗೆ ಪ್ರತೀಕಾರ ತೆಗೆದುಕೊಳ್ಳುವ ದೃಷ್ಟಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಈ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
Advertisement
ಹಾಲಿ ಶಾಸಕ ರಾಜುಗೌಡ ಮತ್ತು ರಾಜಾ ವೆಂಕಟಪ್ಪ ನಾಯಕ ದ್ವೇಷ ಮುಂದುವರಿದಿದ್ದು, ಶಾಸಕರುಗಳ ಕಿತ್ತಾಟಕ್ಕೆ ಕೈ ಮತ್ತು ಕಮಲದ ಕಾರ್ಯಕರ್ತರ ಮಧ್ಯ ದ್ವೇಷ ಮತ್ತಷ್ಟು ಹೆಚ್ಚಾಗಿದೆ. ಬ್ಯಾನರ್ ಮತ್ತು ಪೋಸ್ಟರ್ ವಿಚಾರಕ್ಕೆ ಈ ಕಾರ್ಯಕರ್ತರ ಮಧ್ಯ ಗಲಾಟೆ ನಡೆಯುವ ಸಾಧ್ಯತೆ ಹೆಚ್ಚಿರುವುದರಿಂದ ನಗರಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸುರಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.