ಉಡುಪಿ: ಯುವಕನ ಮೇಲೆ ನಾಲ್ವರು ದುಷ್ಕರ್ಮಿಗಳು ತಲ್ವಾರ್ ನಿಂದ ದಾಳಿ ಮಾಡಿದ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದೆ.
ರಿಯಾಝ್ (34) ದಾಳಿಗೊಳಗಾದ ಯುವಕ. ರಿಯಾಝ್ ಫರಂಗಿಪೇಟೆಯ ಹಂಝಾ ಎಂಬವರ ಮಗನಾಗಿದ್ದು, ಮೀನು ವ್ಯಾಪಾರ ಹಾಗೂ ಫರಂಗಿಪೇಟೆಯ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದಾನೆ. ಇಂದು ಬೆಳಗ್ಗೆ ನಾಲ್ವರು ದುಷ್ಕರ್ಮಿಗಳು ರಿಯಾಝ್ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ್ದಾರೆ.
ರಿಯಾಝ್ ಮೀನು ಖರೀದಿಸಿ ಮಾರಾಟ ಮಾಡಲು ಇಂದು ಮುಂಜಾನೆ 4:30ರ ವೇಳೆಗೆ ಇತರ ಮೂವರೊಂದಿಗೆ ಎಂದಿನಂತೆ ತನ್ನ ಪಿಕಪ್ ವಾಹನದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿಗೆ ಮಲ್ಪೆ ಫಿಶಿಂಗ್ ಪೋರ್ಟ್‍ಗೆ ಆಗಮಿಸಿದ್ದರು. ಬಂದರಿನೊಳಗೆ ತಮ್ಮ ವಾಹನ ನಿಲ್ಲಿಸಿ, ಇತರ ಮೂವರು ಚಹಾ ಕುಡಿಯಲು ಇಳಿದು ಹೋಗಿದ್ದರು. ಆದರೆ ರಿಯಾಝ್ ಅದೇ ಪಿಕಪ್ ವಾಹನದಲ್ಲಿ ನಿದ್ರೆಗೆ ಜಾರಿದ್ದರು.
ಇದೇ ಸಮಯದಲ್ಲಿ ಅವರ ವಾಹನವನ್ನು ಹಿಂಬಾಲಿಸಿಕೊಂಡು ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ನಾಲ್ವರು ರಿಯಾಝ್ ಮೇಲೆ ತಲ್ವಾರ್ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಇವರ ಕಿರುಚಾಟದ ಶಬ್ಧ ಕೇಳಿ ಇತರರು ಸಹಾಯಕ್ಕೆ ಧಾವಿಸಿದಾಗ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಕೋರರು ಬಟ್ಟೆಯಿಂದ ತಮ್ಮ ಮುಖ ಮುಚ್ಚಿಕೊಂಡಿದ್ದರಿಂದ ಗುರುತು ಹಿಡಿಯಲಾಗಿರಲಿಲ್ಲ.
ದಾಳಿಗೊಳಗಾದ ರಿಯಾಜ್ ರವರ ಕೈ ತೂಳು, ಕಾಲಿನ ಬೆರಳು, ತಲೆಯ ಹಿಂಭಾಗಕ್ಕೆ ಗಾಯವಾಗಿರುವುದಲ್ಲದೆ, ಕಿರು ಬೆರಳು ತುಂಡಾಗಿ ಬಿದ್ದಿದೆ. ತುಂಡಾದ ಬೆರಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಮರು ಜೋಡಣೆಯ ಕಾರ್ಯ ನಡೆಯುತ್ತಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ರಿಯಾಝ್ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯ ರಭಸಕ್ಕೆ ವಾಹನದ ಒಳಗೆಲ್ಲಾ ರಕ್ತ ಚಿಮ್ಮಿದೆ.
ಈ ಬಗ್ಗೆ ಮಲ್ಪೆ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ. ದಾಳಿಕೋರರ ಪತ್ತೆಗಾಗಿ ಮಲ್ಪೆ ಮೀನುಗಾರಿಕಾ ಬಂದರು ಪ್ರದೇಶದಲ್ಲಿನ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.