ಬೆಂಗಳೂರು:ಕರ್ತವ್ಯದ ಸಮಯದಲ್ಲೇ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದ ನಿರ್ವಾಹಕನನ್ನು ಕೆಎಸ್ಆರ್‌ಟಿಸಿ ಅಮಾನತುಗೊಳಿಸಿದೆ.
ಇಸಬು ಆಲಿ ತಲ್ಲೂರು ಅಮಾನತುಗೊಂಡ ನಿರ್ವಾಹಕ. ಬೆಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು, ಕಂಡಕ್ಟರ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಮಹಿಳೆ ಹಾಸನದಿಂದ ಪುತ್ತೂರಿಗೆ ಹೊರಟಿದ್ದರು. ಈ ವೇಳೆ ಟಿಕೆಟ್ ನೀಡುವ ನೆಪದಲ್ಲಿ ಕಂಡಕ್ಟರ್ ಮಹಿಳೆಯ ಪಕ್ಕದಲ್ಲಿ ಬಂದು ಕೂತಿದ್ದನು. ನಂತರ ಪಕ್ಕದಲ್ಲಿ ಕೂತಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸುವುದಕ್ಕೆ ಶುರುಮಾಡಿದ್ದನು.
ಮಹಿಳೆ ಎಷ್ಟೇ ವಿರೋಧ ವ್ಯಕ್ತಪಡಿಸಿದ್ದರೂ ಕಂಡಕ್ಟರ್ ಮಾತ್ರ ಮಹಿಳೆಯ ಕೈ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ನಿರ್ವಾಹಕನಿಗೆ ತಿಳಿಯದಂತೆ ಮೊಬೈಲಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕಂಡಕ್ಟರ್ ವರ್ತನೆಗೆ ಅಕ್ರೋಶ ವ್ಯಕ್ತಪಡಿಸಿದ್ದರು.
ಕಾಮಚೇಷ್ಠೆ ಬಗ್ಗೆ ಹೇಳಿಕೊಂಡರೆ ನಿನ್ನ ಮರ್ಯಾದೆಯನ್ನು ಮೂರು ಖಾಸಿಗೆ ಹರಾಜು ಹಾಕುವುದಾಗಿ ಮಹಿಳೆಗೆ ಇಸಬು ಆಲಿ ತಲ್ಲೂರು ಬೆದರಿಕೆ ಹಾಕಿದ್ದ. ಬೆದರಿಕೆ ತಂತ್ರಕ್ಕೆ ಹೆದರದ ಮಹಿಳೆ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಕಾಮುಕ ನಿರ್ವಾಹಕನ ವಿರುದ್ಧ ಕೇಸ್ ದಾಖಲಿಸಿದ್ದರು. ಕಾಮಕ ನಿರ್ವಾಹಕನ ಕುಚೇಷ್ಟೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೆಎಸ್ಆರ್‌ಟಿಸಿ ಆಡಳಿತ ಮಂಡಳಿ ಆರೋಪಿ ಇಸಬು ಆಲಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.