ಭೋಪಾಲ್: ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದು, ರೈಲು ಡಿಕ್ಕಿಯಾಗಿ ಅಥವಾ ಇನ್ನೂ ಹಲವಾರು ಸಂದರ್ಭಗಳಲ್ಲಿ ವ್ಯಕ್ತಿ ಪವಾಡಸದೃಶವಾಗಿ ಬದುಕುಳಿರುವ ಬಗ್ಗೆ ಅನೇಕ ಬಾರಿ ಕೇಳಿದ್ದಿವಿ. ಹೀಗೆ ಮಧ್ಯಪ್ರದೇಶದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.
ಭಾನುವಾರದಂದು ಇಲ್ಲಿನ ಸತ್ನಾ ರೈಲ್ವೆ ನಿಲ್ದಾಣದಲ್ಲಿ ವೃದ್ಧರೊಬ್ಬರ ಮೇಲೆ ಗೂಡ್ಸ್ ರೈಲು ಹರಿದರೂ ಅವರಿಗೆ ಸಣ್ಣ ಪುಟ್ಟ ಗಾಯಗಳೂ ಆಗದೆ ಬದುಕುಳಿದಿದ್ದಾರೆ. ಜವಹಾರ್ ನಗರದ ನಿವಾಸಿಯಾದ ವೃದ್ಧ ರಾಧೆಶ್ಯಾಮ್ ಎರಡು ಪ್ಲಾಟ್‍ಫಾರ್ಮ್‍ಗಳ ನಡುವೆ ಇದ್ದ ಟ್ರ್ಯಾಕ್‍ಗಳನ್ನ ದಾಟುತ್ತಿದ್ದರು. ಟ್ರ್ಯಾಕ್‍ನಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ನುಗ್ಗಿ ಮತ್ತೊಂದು ಬದಿಗೆ ಹೋಗಲು ಪ್ರಯತ್ನಿಸುತ್ತಿದ್ದರು. ಈ ವೇಳೆ ರೈಲು ಚಲಿಸಲು ಶುರುವಾಗಿದೆ. ತಕ್ಷಣ ಆ ವೃದ್ಧ ಟ್ರ್ಯಾಕ್ ಮೇಲೆ ಉದ್ದಕ್ಕೆ ಮಲಗಿದ್ದಾರೆ. ರೈಲಿನ ಎಲ್ಲಾ ಬೋಗಿಗಳು ಹಾದು ಹೋಗಲು ಸುಮಾರು 3 ನಿಮಿಷ ಹಿಡಿದಿದೆ. ಅಲ್ಲಿಯತನಕ ವೃದ್ಧ ಟ್ರ್ಯಾಕ್ ಮೇಲೆಯೇ ಮಲಗಿದ್ದಾರೆ. ಒಂದು ವೇಳೆ ಅವರು ಗಾಬರಿಯಿಂದ ಅಲುಗಾಡಿದ್ದರೆ ಪ್ರಾಣವೇ ಹೋಗುವ ಸಂಭವವಿತ್ತು.
ಈ ಘಟನೆಯನ್ನ ಪ್ರತ್ಯಕ್ಷವಾಗಿ ಕಂಡ ಕೆಲವರು ಇದನ್ನ ಮೊಬೈಲ್‍ನಲ್ಲಿ ಸರೆಹಿಡಿದಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ. ರೈಲು ಮುಂದಕ್ಕೆ ಹೋದ ನಂತರ ವ್ಯಕ್ತಿಯೊಬ್ಬರು ಟ್ರ್ಯಾಕ್ ಬಳಿ ಹೋಗಿ ವೃದ್ಧರನ್ನು ಮೇಲೆತ್ತಿ ಕೈ ಹಿಡಿದುಕೊಂಡು ಅಲ್ಲಿಂದ ಕರೆದುಕೊಂಡು ಬಂದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ವೃದ್ಧರಿಗೆ ಯಾವುದೇ ಗಾಯಗಳಾಗಿಲ್ಲ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವೃದ್ಧ ರಾಧೆಶ್ಯಾಮ್, ದೇವರ ದಯದಿಂದ ನಾನು ಬದುಕುಳಿದೆ ಎಂದಿದ್ದಾರೆ.