ಮಂಗಳೂರು: ನೀರಿಲ್ಲದೆ ಒಣಗಿ ಹೋಗಿದ್ದ ಕ್ರಿಶ್ಚಿಯನ್ ರೈತರೋರ್ವರ ಕೃಷಿ ತೋಟಕ್ಕೆ ನಾಗದೇವ ಕೃಪೆ ತೋರಿ ಅಚ್ಚರಿ ಮೂಡಿಸಿದ್ದಾನೆ.
ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ನಿಡ್ಡೋಡಿಯ ಗುಂಡೆಲ್ ಎಂಬಲ್ಲಿ ವಾಸ ಇರುವ ವಿಕ್ಟರ್ ಡಿಸಿಲ್ವರ ಕೃಷಿ ತೋಟಕ್ಕೆ ಈ ಬಾರಿ ಮಳೆ ಇಲ್ಲದೆ ನೀರು ಇಲ್ಲದಾಗಿತ್ತು. ಏಳು ಎಕರೆ ವ್ಯಾಪ್ತಿಯ ಅಡಿಕೆ ತೋಟಗಳ ಮಧ್ಯೆ ನಾಲ್ಕು ಕಡೆ ಕೊಳವೆ ಬಾವಿ ತೋಡಿಸಿದರೂ ನೀರು ಸಿಕ್ಕಿರಲಿಲ್ಲ. ಐದಾರು ಲಕ್ಷ ಖರ್ಚು ಮಾಡಿ ನೊಂದಿದ್ದ ವಿಕ್ಟರ್ ಡಿಸಿಲ್ವ ಕೊನೆಗೆ ಜ್ಯೋತಿಷಿಯ ಮೊರೆಹೋಗಿದ್ದರು.
ಉಪ್ಪಿನಂಗಡಿ ಮೂಲದ ಜ್ಯೋತಿಷಿ ಜಗದೀಶ್ ಶಾಂತಿ ಜಾಗದಲ್ಲಿ ಪ್ರಶ್ನೆ ಇಟ್ಟು, ನಾಗದೋಷ ಮತ್ತು ಜಾಗಕ್ಕೆ ಸಂಬಂಧಿಸಿದ ಜುಮಾದಿ ದೈವದ ದೋಷದ ಬಗ್ಗೆ ಹೇಳಿದರು. ಬಳಿಕ ನಾಗನಿಗೆ ಅದೇ ಜಾಗದಲ್ಲಿ ಆಶ್ಲೇಷ ಬಲಿ ಸೇವೆ ಅರ್ಪಿಸಿದ ಕ್ರಿಶ್ಚಿಯನ್ ಕುಟುಂಬ, ದೈವಗಳಿಗೆ ಸೀಯಾಳ ಅರ್ಪಿಸಿ ಬೇಡಿಕೊಂಡಿತ್ತು. ಆ ನಂತರ ಜ್ಯೋತಿಷಿ ಸೂಚಿಸಿದ ಜಾಗದಲ್ಲಿ ಮತ್ತೆ ಬೋರ್‍ವೆಲ್ ಕೊರೆದಾಗ, ಕೇವಲ 90 ಅಡಿ ಆಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಿಕ್ಕಿದೆ.
ನಾಲ್ಕು ಕಡೆ ಬೋರ್ ಹಾಕಿದರೂ ನೀರು ಸಿಗದೇ ಇದ್ದ ಜಾಗದಲ್ಲಿ ಈಗ ಯಥೇಚ್ಛ ನೀರು ಲಭ್ಯವಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಬಳಿಕ ಇತರೆ ಕೊಳವೆ ಬಾವಿಗಳಲ್ಲೂ ಪರಿಶೀಲಿಸಿದಾಗ ಕೇವಲ 15 ಅಡಿ ಆಳದಲ್ಲಿಯೇ ಸಾಕಷ್ಟು ನೀರು ಕಂಡುಬಂದಿದೆ. ಊರಿನ ಸಮಸ್ತರಿಗೆ ಇದು ಅಚ್ಚರಿಗೆ ಕಾರಣವಾಗಿದ್ದು, ವಿಜ್ಞಾನಕ್ಕೂ ಸವಾಲ್ ಆಗಿ ಪರಿಣಮಿಸಿದೆ. ಈಗ ಜನರು ಅಚ್ಚರಿಯಿಂದ ಅಲ್ಲಿಗೆ ತೆರಳುತ್ತಿದ್ದು ನಾಗನೇ ಕೃಪೆ ತೋರಿದ್ದಾನೆ ಎನ್ನುವ ಮಾತನ್ನು ಜನ ಆಡಿಕೊಳ್ಳುತ್ತಿದ್ದಾರೆ.