ಜೈಪುರ: ವಿವಾಹಿತ ಮಹಿಳೆ ಹಾಗೂ ಆಕೆಯ ಪ್ರಿಯಕರ ಒಬ್ಬರಿಗೊಬ್ಬರು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ.
ಅಂಜು ಸುತಾರ್ ಹಾಗೂ ಶಮ್ಕರ್ ಚೌದ್ರಿ ಮೃತ ಪ್ರೇಮಿಗಳು. ಅಂಜು ಹಾಗೂ ಶಮ್ಕರ್ ಇಬ್ಬರು 21 ವಯಸ್ಸಿನವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಅಂಜುಗೆ ಮದುವೆಯಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಲ್ ಆಫಿಸರ್ ಅಜಿತ್ ಸಿಂಗ್ ತಿಳಿಸಿದ್ದಾರೆ.
ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಇಬ್ಬರು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ನಡೆದ ಸ್ಥಳದಲ್ಲಿ ದೇಸಿ ಪಿಸ್ತೂಲ್ ಪತ್ತೆಯಾಗಿದ್ದು, ನಾವು ಅದನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಬಾರ್ಮರ್ ಎಸ್‍ಪಿ ರಾಶಿ ದೋಗ್ರಾ ಹೇಳಿದ್ದಾರೆ.
ಪೊಲೀಸರು ಪಿಸ್ತೂಲ್ ಜೊತೆ ಮೊಬೈಲ್ ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲಿನಲ್ಲಿ ಇದ್ದ ಆಡಿಯೋ ಕ್ಲಿಪ್‍ನಲ್ಲಿ ಲವ್ ಫೇಲ್ಯೂರ್ ಆಗಿದ್ದಕ್ಕೆ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಪ್ರೇಮಿಗಳು ಹೇಳಿದ್ದಾರೆ ಎಂದು ಸರ್ಕಲ್ ಆಫಿಸರ್ ಅಜಿತ್ ಸಿಂಗ್ ತಿಳಿಸಿದ್ದಾರೆ.
ಅಂಜು ಹಾಗೂ ಶಮ್ಕರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.