Connect with us

Crime

ಅಮ್ಮ-ಚಿಕ್ಕಮ್ಮ ಸೇರಿ ಮಾಟ ಮಾಡಿದ್ರು, ಬಾಲಕಿಯ ಬಾಯಿ, ಗುಪ್ತಾಂಗಕ್ಕೆ ಕೈ ಹಾಕಿ ಕೊಂದೇಬಿಟ್ರು!

Published

on

ಮುಂಬೈ: ಮಲಬದ್ಧತೆ ನಿವಾರಿಸುತ್ತೇವೆಂದು ಮಾಟ ಮಂತ್ರ ಮಾಡಿ 11 ವರ್ಷದ ಬಾಲಕಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ಬಾಲಕಿಯ ತಾಯಿ, ತಂದೆ ಹಾಗೂ ಚಿಕ್ಕಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಬಾಲಕಿ ತನ್ನ ಪೋಷಕರೊಂದಿಗೆ ಮಹಾರಾಷ್ಟ್ರದ ವಿರಾರ್‍ನ ಮನ್ವೇಲ್‍ಪಾದಾದಲ್ಲಿ ವಾಸವಿದ್ದಳು. ಡಿಸೆಂಬರ್ 15ರಿಂದ ಬಾಲಕಿ ಮಲಬದ್ಧತೆಯಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿಯ ತಾಯಿ ತಾನು ದೇವಮಾನವಿ ಎಂದು ಹೇಳಿಕೊಂಡು ಬಾಲಕಿಯನ್ನ ರೋಗವನ್ನು ವಾಸಿ ಮಾಡ್ತೀನೆಂದು ಗಂಡನಿಗೆ ಹೇಳಿದ್ದಳು. ನಂತರ ಡಿಸೆಂಬರ್ 17ರಂದು ಚಿಕಿತ್ಸೆ ಮಾಡಲು ತನ್ನ ತಂಗಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಳು.

ಹೊಟ್ಟೆ ಮೇಲೆ ಕುಳಿತ್ರು, ಗುಪ್ತಾಂಗಕ್ಕೆ ಕೈ ಹಾಕಿದ್ರು: ಇಬ್ಬರು ಮಹಿಳೆಯರು ಮೈ ಮೇಲೆ ದೆವ್ವ ಬಂದಿದೆ ಎಂದು ಹೇಳಿಕೊಂಡು, ಬಾಲಕಿಯ ದೇಹದ ಮೇಲೆ ಅರಿಶಿಣ ಕುಂಕುಮ ಸುರಿದಿದ್ದಾರೆ. ನಂತರ ತಾಯಿ ಬಾಲಕಿಯ ಹೊಟ್ಟೆ ಮೇಲೆ ಕುಳಿತಿದ್ದಾಳೆ. ಅಲ್ಲದೆ ಹೊಟ್ಟೆಯಿಂದ ಕಲ್ಮಶವನ್ನ ಹೊರತೆಗೆಯುವುದಾಗಿ ಹೇಳಿ ಬಾಲಕಿಯ ಬಾಯಿ ಹಾಗೂ ಗುಪ್ತಾಂಗಕ್ಕೆ ಕೈ ಹಾಕಿದ್ದಾರೆ. ಈ ವೇಳೆ ಬಾಲಕಿ ಜೋರಾಗಿ ಕಿರುಚಿಕೊಳ್ಳುತ್ತಿದ್ದರೂ ಆಕೆ ಕೈಯಿಂದ ತಪ್ಪಿಸಿಕೊಂಡು ಓಡಿಹೋಗದಂತೆ ನೋಡಿಕೊಂಡಿದ್ದಾರೆ.

ತಡೆಯಲು ಬಂದ ಗಂಡನ ಕೆನ್ನೆಗೆ ಹೊಡೆದ್ಳು: ಈ ನಡುವೆ ಸಂತ್ರಸ್ತ ಬಾಲಕಿಯ ತಂದೆ ಹಾಗೂ 14 ವರ್ಷದ ಅಣ್ಣ ಮಹಿಳೆಯನ್ನು ತಡೆಯಲು ಬಂದಿದ್ದು, ಎರಡು ಬಾರಿ ಕೆನ್ನೆಗೆ ಹೊಡೆಸಿಕೊಂಡು ದೂರ ಸರಿದಿದ್ದಾರೆ. ನಂತರ ಬಾಲಕಿ ಪ್ರಜ್ಞೆ ತಪ್ಪಿದ್ದನ್ನು ಕಂಡು ಭಯಗೊಂಡ ತಾಯಿ ಮನೆಯವರಿಗೆಲ್ಲಾ ವಿಷಯ ತಿಳಿಸಿದ್ದಾಳೆ. ಆಕೆಯ ಅಣ್ಣ ಮನೆಗೆ ಬಂದು ಬಲಕಿಯನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಬಾಲಕಿ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾಳೆಂದು ವೈದ್ಯರು ಹೇಳಿದ್ದಾರೆ.

ಬಾಲಕಿಗೆ ಏನೆಲ್ಲಾ ಆಯಿತೆಂದು ಗೊತ್ತಾದ ಬಳಿಕ ಸೋದರ ಮಾವ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳೀಯರನ್ನ ವಿಚಾರಣೆ ಮಾಡಿದಾಗ, ಶನಿವಾರ ತಡರಾತ್ರಿ ಬಾಲಕಿ ಕಿರುಚಾಡುತ್ತಿದ್ದುದು ಕೇಳಿಸಿತ್ತು ಎಂದು ಹೇಳಿದ್ದಾರೆ.

ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ಕಳಿಸಲಾಗಿತ್ತು. ಈ ವೇಳೆ ಬಾಲಕಿಯ ಕತ್ತು, ಎದೆ, ಕೈ ಹಾಗೂ ಗುಪ್ತಾಂಗದಲ್ಲಿ ಗಾಯಗಳಾಗಿರುವುದು ಪತ್ತೆಯಾಗಿತ್ತು. ಬಳಿಕ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಲಾಗಿದ್ದು, ಮಂಗಳವಾರ ರಾತ್ರಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಬುಧವಾರದಂದು ಆರೋಪಿಗಳನ್ನ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 23ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ವಿರಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ 18 ವರ್ಷದ ಯುವತಿಯ ರೋಗ ಗುಣಪಡಿಸಲು ಮಾಂತ್ರಿಕನೊಬ್ಬ ಆಕೆಗೆ ಥಳಿಸಿ, ಸಗಣಿ ತಿನ್ನಿಸಿದ್ದ.

Click to comment

Leave a Reply

Your email address will not be published. Required fields are marked *