ಹಾಸನ: ಇತ್ತೀಚೆಗೆ ಬೆಂಗಳೂರಿನಿಂದ ಹಾಸನ ಶಾಲೆಯೊಂದಕ್ಕೆ ಪ್ರವೇಶ ಪಡೆದಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಬುಧವಾರ ಸಂಜೆ ತರಗತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ಲಕ್ಷ್ಮಿ(16) ಆತ್ಮಹತ್ಯೆಗೆ ಶರಣಾದ ಬಾಲಕಿ. ಲಕ್ಷ್ಮಿ ನಗರದ ಹೊರವಲಯದಲ್ಲಿರುವ ಲೋಯಲಾ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ತನ್ನದೇ ತರಗತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಲಕ್ಷ್ಮಿ ಪೋಷಕರು ಬೆಂಗಳೂರು ಮೂಲದವರಾಗಿದ್ದು, ಇದೇ ವರ್ಷ ಬೆಂಗಳೂರಿನಲ್ಲಿ ಓದುತ್ತಿದ್ದ ಬಾಲಕಿಯನ್ನು ಹಾಸನದ ಶಾಲೆಗೆ ಎಸ್‍ಎಸ್‍ಎಲ್‍ಸಿ ಅಧ್ಯಯನ ಮಾಡಲು ಸೇರಿಸಲಾಗಿತ್ತು. ಬುಧವಾರ ತರಗತಿ ಮುಗಿದ ನಂತರ ಎಲ್ಲ ವಿದ್ಯಾರ್ಥಿಗಳು ಹಾಸ್ಟೆಲ್‍ಗೆ ತೆರಳಿದ್ದರೆ ಲಕ್ಷ್ಮಿ ಮಾತ್ರ ಅಲ್ಲಿಂದ ಹೊರಡಲಿಲ್ಲ.
ರಾತ್ರಿಯಾದರೂ ಲಕ್ಷ್ಮಿ ಹಾಸ್ಟೆಲ್‍ಗೆ ಬರದೇ ಇದ್ದಾಗ ಬಂದು ನೋಡಿದಾಗ ತರಗತಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಹಾಸನಕ್ಕೆ ಕಳುಹಿಸಿದ್ದು ಮನ ನೋಯಿಸಿತ್ತು ಎನ್ನಲಾಗಿದೆ. ಆದರೆ ಆತ್ಮಹತ್ಯೆ ಶೈಲಿಯಿಂದಾಗಿ ಇದು ಕೊಲೆ ಎಂಬ ಅನುಮಾನವೂ ಕೂಡ ವ್ಯಕ್ತವಾಗಿದೆ.
ಈ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.