ಸಹೋದರನ ಜೊತೆ ಅತ್ತಿಗೆಯನ್ನು ಕೊಂದ ಅಪ್ರಾಪ್ತ ನಾದಿನಿ ಅರೆಸ್ಟ್: ಈಗ ಪೊಲೀಸರ ವಿರುದ್ಧ ದೂರು

Public TV
2 Min Read
Minor police crime jail

ಲಕ್ನೋ: ಸಹೋದರನ ಜೊತೆ ಸೇರಿಕೊಂಡು ಅತ್ತಿಗೆಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಸಹೋದರಿಯನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಆದರೆ ಈಗ ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧವೇ ದೂರು ದಾಖಲಾಗಿದೆ.

ಬಂಧನಕ್ಕೆ ಒಳಗಾದವಳು ಈಗ ಅಪ್ರಾಪ್ತೆ ಹೌದೋ ಅಲ್ಲವೋ ಎನ್ನುವ ಬಗ್ಗೆ ವಿವಾದ ಎದ್ದಿದ್ದು ಪೊಲೀಸರು ಆಕೆ ಅಪ್ರಾಪ್ತೆಯಲ್ಲ ಎಂದು ಹೇಳಿದರೆ, ಆರ್‍ಟಿಐ ಕಾರ್ಯಕರ್ತರೊಬ್ಬರು ಆಕೆ ಅಪ್ರಾಪ್ತೆ ಎಂದು ಹೇಳಿ ಪೊಲೀಸರ ವಿರುದ್ಧವೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ಏನಿದು ಪ್ರಕರಣ?
ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪೋಷಕರು ಪತಿ ಮತ್ತು ಆತನ ಸಹೋದರಿಯ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಬಂಧಿಸಿದ ಬಳಿಕ ಪತಿಯ ಸಹೋದರಿಯನ್ನು ಪೊಲೀಸರು 12 ದಿನಗಳ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡು ಸೋಮವಾರ ಕೋರ್ಟ್ ಗೆ ಹಾಜರು ಪಡಿಸಿ ಜೈಲಿಗೆ ಅಟ್ಟಿದ್ದಾರೆ.

ವಿವಾದ ಆಗಿದ್ದು ಯಾಕೆ?
ಅಪ್ರಾಪ್ತ ವಯಸ್ಸಿನವರು ಅಪರಾಧಗಳನ್ನು ಎಸಗಿದರೆ ಅವರನ್ನು ಪೊಲೀಸರು 24 ಗಂಟೆಗಿಂತ ಹೆಚ್ಚು ಹೊತ್ತು ಲಾಕಪ್ ನಲ್ಲಿ ಇರಿಸುವಂತಿಲ್ಲ. ಬಾಲನ್ಯಾಯ ಕಾಯ್ದೆಯ ಪ್ರಕಾರ ಅಪ್ರಾಪ್ತರನ್ನು ಬಂಧಿಸಿ ಅವರನ್ನು ಬಾಲಾಪರಾಧಿ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಬೇಕು. ಅದರಲ್ಲೂ ಬಾಲಕಿ ಆಗಿದ್ದರೆ, ಆಕೆಯನ್ನು ನಾರಿ ನಿಕೇತನ್ ಕೇಂದ್ರಕ್ಕೆ ಕಳುಹಿಸಬೇಕು. ಆದರೆ ಪೊಲೀಸರು ಅಪ್ರಾಪ್ತೆಯನ್ನು ತಮ್ಮ ವಶದಲ್ಲಿ 12 ದಿನಗಳ ಕಾಲ ಇಟ್ಟುಕೊಂಡು ಈಗ ಜೈಲಿಗೆ ಕಳುಹಿಸಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

ಬಂಧನಕ್ಕೆ ಒಳಗಾದ ಬಾಲಕಿಗೆ 15 ವರ್ಷವಾಗಿದ್ದು ಆಕೆಯನ್ನು ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡಿರುವುದು ಬಾಲನ್ಯಾಯ ಕಾಯ್ದೆಯ ಪ್ರಕಾರ ಅಪರಾಧ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಕೀಲ ಮತ್ತು ಆರ್‍ಟಿಐ ಕಾರ್ಯಕರ್ತ ಪ್ರತೀಕ್ ಚೌಧರಿ ಎಂಬವರು ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ಪೊಲೀಸರು ಹೇಳೋದು ಏನು?
ಆಕೆಗೆ 15 ವರ್ಷವಲ್ಲ, ಪ್ರಾಪ್ತ ವಯಸ್ಸಾಗಿದ್ದು ನಾವು ಯಾವುದೇ ಲೋಪ ಎಸಗಿಲ್ಲ. ಪ್ರಾಪ್ತಳಾಗಿರುವ ಕಾರಣ ಆಕೆಯನ್ನು ನಾವು ಜೈಲಿಗೆ ಕಳುಹಿಸಿದ್ದೇವೆ. ಒಂದು ವೇಳೆ ಆಕೆ ಅಪ್ರಾಪ್ತಳು ಎಂದು ಕೋರ್ಟ್ ನಲ್ಲಿ ಸಾಬೀತಾದರೆ ಆಕೆ ಕಾನೂನಿನ ಲಾಭವನ್ನು ಪಡೆದುಕೊಳ್ಳುತ್ತಾಳೆ ಎಂದು ಗಂಗೇರಿ ಪೊಲೀಸ್ ಠಾಣೆಯ ಸ್ಟೇಷನ್ ಅಧಿಕಾರಿ ರಾಮ್ ವಲ್ಲಭ ಶರ್ಮಾ ಹೇಳಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?
ಭಾನುವಾರ ಸಂಜೆ ಠಾಣೆಯಲ್ಲಿ ಆಕೆ ಅಳುತ್ತಾ ಕುಳಿತ್ತಿದ್ದನ್ನು ಕೆಲ ಮಾಧ್ಯಮ ಪ್ರತಿನಿಧಿಗಳು ಗಮನಕ್ಕೆ ಬಂದ ಬಳಿಕ ಆಕೆ ಅಪ್ರಾಪ್ತಳು ಎನ್ನುವ ವಿಚಾರ ಬಳಕಿಗೆ ಬಂದಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಸ್ಮಾರ್ಟ್ ವಿಲೇಜ್ ಫೌಂಡೇಶನ್ ಹೆಸರಿನ ಸಂಘಟನೆಯೊಂದು ಆಕೆಯ ಸಹಾಯಕ್ಕೆ ಬಂದಿದ್ದು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *