ಲಕ್ನೋ: ತನ್ನ ಪ್ರಿಯತಮೆಗೆ ಐ-ಫೋನ್ ಕೊಡಬೇಕೆಂಬ ಉದ್ದೇಶದಿಂದ 14 ವರ್ಷದ ಬಾಲಕನನ್ನು ಅಪಹರಿಸಿ ಹತೈಗೈದ 17 ವರ್ಷದ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಹೌದು, ಪ್ರಿಯತಮೆಗೆ ಐ-ಫೋನ್ ಕೊಡಿಸಬೇಕೆಂಬ ಉದ್ದೇಶದಿಂದ 17 ವರ್ಷ ಯುವಕನೊಬ್ಬ 14 ವರ್ಷದ ಬಾಲಕನನ್ನು ಅಪಹರಿಸಿ, ಬಳಿಕ ಬರ್ಬರವಾಗಿ ಹತ್ಯೆ ಮಾಡಿ, ಸುಟ್ಟುಹಾಕಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
14 ವರ್ಷದ ಅಭಿಷೇಕ್ ಮೃತ ಬಾಲಕ. ಮೃತ ಬಾಲಕನ ತಂದೆ ಸರ್ವೇಶ್ ಯಾದವ್ ಖಾಸಗಿ ಕಂಪನಿಯ ಬಸ್ ಚಾಲಕನಾಗಿದ್ದಾರೆ. ಸರ್ವೇಶ್ ಆರೋಪಿಯ ತಂದೆಯ ಮನೆಯಲ್ಲಿ ಬಾಡಿಗೆಗಿದ್ದರು. ಅಲ್ಲದೇ ಆರೋಪಿಯ ತಂದೆಯೂ ಸಹ ಸರ್ವೇಶ್ ಯಾದವ್ ಕಂಪನಿಯಲ್ಲೇ ಬಸ್ ನಿರ್ವಾಹಕರಾಗಿದ್ದರು.
Advertisement
ಏನಿದು ಘಟನೆ?
ಕಳೆದ ಮಂಗಳವಾರ ಸಂಜೆ 8 ನೇ ತರಗತಿ ಓದುತ್ತಿದ್ದ ಅಭಿಷೇಕ್ ಕೋಚಿಂಗ್ ಕ್ಲಾಸ್‍ಗೆ ಹೋಗಿದ್ದವನು ವಾಪಾಸ್ಸು ಬಂದಿರಲಿಲ್ಲ. ಅದೇ ದಿನ ಸಂಜೆ ಅಭಿಷೇಕ್ ತಾಯಿ ಹಾಗೂ ತಂದೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಮಗನನ್ನು ಅಪಹರಿಸಿದ್ದು, ಬಿಡುಗಡೆ ಮಾಡಲು 20 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಇಟ್ಟಿದ್ದರು. ಕೂಡಲೇ ಎಚ್ಚೆತ್ತ ಪೋಷಕರು ಶಾಲೆ ಹಾಗೂ ಕೋಚಿಂಗ್ ಸೆಂಟರ್ ಬಳಿ ವಿಚಾರಿಸಿದಾಗ ಮಗ ನಾಪತ್ತೆಯಾಗಿರುವುದು ತಿಳಿದು ಬಂದಿದೆ.
Advertisement
ಕೂಡಲೇ ಆರೋಪಿಗೆ ಕರೆ ಮಾಡಿದ್ದ ಪೋಷಕರು, ಅಷ್ಟು ದೊಡ್ಡ ಮೊತ್ತದ ಹಣವನ್ನು ಹೊಂದಿಸಲು ನಮ್ಮಿಂದ ಸಾಧ್ಯವಿಲ್ಲ. ನಮಗೆ ನಾಳೆ ಬೆಳಗ್ಗೆಯವರೆಗೂ ಸಮಯ ಕೊಡುವಂತೆ ಕೇಳಿಕೊಂಡಿದ್ದರು. ಇದರ ಜೊತೆ ಪೋಷಕರು ಮಣಿಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು.
ಪತ್ತೆಯಾಗಿದ್ದು ಹೇಗೆ?
ಮಣಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಕರೆ ಬಂದಿದ್ದರ ಕುರಿತು ತನಿಖೆ ನಡೆಸಿದರು. ತನಿಖೆ ವೇಳೆ ಅಭಿಷೇಕ್ ವಾಸವಿದ್ದ ಮನೆಯ ಆಸುಪಾಸಿನಲ್ಲೇ ಕರೆ ಮಾಡಿರುವುದು ಪತ್ತೆಯಾಗಿತ್ತು. ಅಲ್ಲದೆ ಕರೆ ಮಾಡಿದ್ದ ಮೊಬೈಲ್ ನಂಬರ್ ಅನ್ನು ಪರೀಕ್ಷಿಸಿದಾಗ ಅದು ನಕಲಿ ದಾಖಲೆಗಳಿಂದ ಖರೀದಿಸಿರುವುದು ಬೆಳಕಿಗೆ ಬಂದಿತ್ತು.
ಮೊಬೈಲ್ ನೆಟ್‍ವರ್ಕ್ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಮೊಬೈಲ್‍ನಲ್ಲಿ ಮತ್ತೊಂದು ಸಿಮ್ ಸಂಖ್ಯೆ ದಾಖಲಾಗಿರುವುದು ಪತ್ತೆಯಾಗಿತ್ತು. ಅದನ್ನು ಪರೀಕ್ಷಿಸಿದಾಗ ಆ ಮೊಬೈಲ್ ಸಂಖ್ಯೆ ಆರೋಪಿಯ ಸಹೋದರಿಗೆ ಸೇರಿದ ನಂಬರ್ ಎನ್ನುವುದು ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಮನೆ ದಾಳಿ ನಡೆಸಿ ಅಪಹರಣಕಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಬಂಧಿತ ಅಪ್ರಾಪ್ತ ಬಾಲಕನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ, ನನ್ನ ಪ್ರಿಯತಮೆಗಾಗಿ ಐ-ಫೋನ್ ಖರೀದಿಸಲು ಅಭಿಷೇಕ್‍ನನ್ನು ಮಂಗಳವಾರ ಅಪಹರಿಸಿದ್ದೆ. ಆದರೆ ಆತ ಜೋರಾಗಿ ಅಳಲು ಪ್ರಾರಂಭಿಸಲು ಶುರುಮಾಡಿದ. ಇದರಿಂದ ನಾನು ಆತನನ್ನು ಕೊಂದು ಸುಟ್ಟು ಹಾಕಿದೆ ಎಂದು ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾನೆ.
ಘಟನೆ ಸಂಬಂಧ ಅಭಿಷೇಕ್ ತಂದೆ ದೂರಿನ ಆಧಾರ ಮೇಲೆ ಆರೋಪಿ, ಆತನ ತಂದೆ ಹಾಗೂ ಸಹೋದರರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಮಣಿಪುರ ಪೊಲೀಸರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ), 364 ಎ (ಅಪಹರಣ ಹಾಗೂ ಹಲ್ಲೆ) 201 (ಸಾಕ್ಷ್ಯ ನಾಶ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಭಿಷೇಕ್ ತಂದೆ ಸರ್ವೇಶ್ ಯಾದವ್, ಕೇವಲ 17 ವರ್ಷದ ಬಾಲಕನೊಬ್ಬನೇ ಹತ್ಯೆ ಮಾಡಿ, ಆತನನ್ನು ಸುಟ್ಟು ಹಾಕಿ ನಂತರ ಗುಂಡಿ ತೆಗೆದು ಹೂಳಲು ಹೇಗೆ ಸಾಧ್ಯ? ಇದಕ್ಕೆ ಆತನ ಕುಟುಂಬದವರು ಸಹ ಬೆಂಬಲ ನೀಡಿದ್ದಾರೆ. ನನ್ನ ಮಗನ ಹತ್ಯೆ ಪೂರ್ವನಿಯೋಜಿತ ಕೊಲೆ ಎಂದು ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv