ಬೆಂಗಳೂರು: ಮಳೆಗಾಲಕ್ಕೆ ಸಚಿವರ ಮನೆಗಳು ಸಜ್ಜಾಗಿದೆ. ಮುಳುಗೋ ಏರಿಯಾಗಳಲ್ಲಿ ಮಳೆಗಾಲದ ಮುನ್ನೆಚ್ಚರಿಕೆ ವಹಿಸದ ಬಿಬಿಎಂಪಿ ಸದಾಶಿವನಗರದ ಸಚಿವರುಗಳ ಮನೆ ಮುಂದೆ ಮಾತ್ರ ಫುಲ್ ಆಕ್ಟೀವ್ ಆಗಿದೆ.
ಮಳೆ ಬಂದಾಗ ಸದಾಶಿವ ನಗರದ ಯಾವ ಮನೆಗಳಿಗೂ ನೀರು ನುಗ್ಗಿದ ಉದಾಹರಣೆಯೇ ಇಲ್ಲ. ಆದರೆ ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ಈಗ ಡಿಸಿಎಂ ಪರಮೇಶ್ವರ್ ಸರ್ಕಾರಿ ಮನೆ ಮತ್ತು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಮುಂಭಾಗದಲ್ಲಿ ಮಳೆ ನೀರು ನೇರವಾಗಿ ಸ್ಯಾಂಕಿಗೆ ಕೆರೆಗೆ ಹರಿದು ಹೋಗುವ ವ್ಯವಸ್ಥೆ ಮಾಡಲಾಗಿದೆ.
ಮಳೆ ನೀರು ಮನೆಗೆ ಬಿಡಿ, ರಸ್ತೆಯಲ್ಲಿ ನಿಲ್ಲದೇ ಸರಾಗವಾಗಿ ಸ್ಯಾಂಕಿ ಕೆರೆಗೆ ಹೋಗುವಂತೆ ಭೂಮಿಯೊಳಗೆ ಪೈಪ್ ಹಾಕಿ ಕೆರೆಗೆ ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಇವರ ಮನೆ ಮುಂದೆ ಕೊಳಚೆ ನೀರು ಕಾಲುವೆ ಶುದ್ಧೀಕರಣ ಕಾರ್ಯವೂ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಈ ಮಳೆ ನೀರಿನ ಜೊತೆಗೆ ಕೊಳಚೆ ನೀರನ್ನು ನೇರವಾಗಿ ಕೆರೆಗೆ ಹರಿಸುತ್ತಿದ್ದಾರಾ ಎನ್ನುವ ಅನುಮಾನವೂ ವ್ಯಕ್ತವಾಗಿದೆ.
ಡಿಸಿಎಂ ನಿರ್ದೇಶನದಂತೆ ಬಿಬಿಎಂಪಿಯಿಂದ ಕಾರ್ಯ ನಡೆಯುತ್ತಿದ್ದು, ಡಿಸಿಎಂ ಸರ್ಕಾರಿ ಬಂಗಲೆ ಮುಂದಿನ ರಸ್ತೆ ಮೇಲಿರುವ ಕಾಳಜಿ ಜನಸಾಮಾನ್ಯರ ಮೇಲ್ಯಾಕೆ ಇಲ್ಲ. ಜಯಮಾಲ ಮೇಡಂ ಆಯ್ತು ಈಗ ಪರಮೇಶ್ವರ್ ಸರದಿ ಆಗಿದೆ. ಮಳೆಯ ನೀರಿನ ಜೊತೆಗೆ ಮೋರಿ ನೀರು ನೇರವಾಗಿ ಕೆರೆಗೆ ಹೋಗಲು ಕನೆಕ್ಷನ್ ಕೊಟ್ಟಿದ್ದಾರಾ. ಸಚಿವರ ಮನೆ ಮುಂದೆ ನಡೆಸುವ ಅಬ್ಬರದ ಕಾಮಗಾರಿಗಳು ಬೇರೆ ಕಡೆ ಯಾಕೆ ಇಲ್ಲ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.