ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿದ್ದ ಕೊಳಕು ಬೆಡ್, ಕೊಠಡಿಗಳು ಹಾಗೂ ಅವ್ಯವಸ್ಥೆಯನ್ನು ಕಂಡು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹಾಗೂ ವೈದ್ಯಕೀಯ ಸಚಿವ ಇ. ತುಕಾರಾಂ ಅವರು ಸಿಟ್ಟಿಗೆದ್ದು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಇಂದು ಬ್ರಿಮ್ಸ್ ಆಸ್ಪತ್ರೆಯನ್ನು ಪರಿಶೀಲಿಸಲು ಮೂವರು ಸಚಿವರು ಹಾಗೂ ಎಂಪಿ ಭೇಟಿ ಕೊಟ್ಟಿದ್ದರು. ಆರೋಗ್ಯ ಸಚಿವ ಶಿವಾನಂದ ಪಾಟೀಲ್, ವೈದ್ಯಕೀಯ ಸಚಿವ ಇ ತುಕಾರಾಂ, ಕ್ರೀಡಾ ಸಚಿವ ರಹೀಂ ಖಾನ್ ಹಾಗೂ ಸಂಸದ ಭಗವಂತ್ ಖೂಬಾ ಅವರು ಆಸ್ಪತ್ರೆಗೆ ಭೇಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಕೆಂಡಾಮಂಡಲರಾದರು.
Advertisement
Advertisement
ಆಸ್ಪತ್ರೆಯ ಅವ್ಯವಸ್ಥೆ, ರೋಗಿಗಳಿಗೆ ನೀಡುತ್ತಿರುವ ಕೊಳಕು ಬೆಡ್‍ಗಳು, ಸ್ವಚ್ಛವಿಲ್ಲದ ಕೊಠಡಿಗಳನ್ನು ಕಂಡು ಸಚಿವರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ಹಾಗೆಯೇ ಆಸ್ಪತ್ರೆಯ ಮುಚ್ಚಿದ ಕೋಣೆಯ ಬೀಗ ತೆಗೆಯಲು ಸಚಿವರು ತಾಕೀತು ಮಾಡಿದ್ದು, ಕೊಣೆಯನ್ನು ಸಿಬ್ಬಂದಿಗಳು ತೆರೆದ ನಂತರ ಅಲ್ಲಿನ ದುಸ್ಥಿತಿ ಕಂಡು ಕೆಂಡಾಮಂಡಲರಾದರು. ಏನಿದು ಬ್ರಿಮ್ಸ್ ಪರಿಸ್ಥಿತಿ ಎಂದು ಪ್ರಶ್ನಿಸಿ ಜಿಲ್ಲಾ ಸರ್ಜನ್ ಡಾ. ರತಿಕಾಂತ್‍ಸ್ವಾಮಿ ಮೇಲೆ ಸಚಿವರು ಗರಂ ಆದರು.
Advertisement
Advertisement
ಬಳಿಕ ಬೀದರ್ ಬ್ರಿಮ್ಸ್ ಮೆಡಿಕಲ್ ಕಾಲೇಜು ಮುಂಭಾಗದಲ್ಲಿ ಶಿವಾನಂದ ಪಾಟೀಲ್ ಅವರಿಗೆ ವ್ಯಕ್ತಿಯೊಬ್ಬ ಹೇಳಿದ ಮಾತು ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ಸಚಿವರನ್ನು ಕಂಡ ವ್ಯಕ್ತಿ, ಬ್ರಿಮ್ಸ್ ಗೆ ಬೀಗ ಹಾಕಿಕೊಂಡು ಹೋಗಿ ಎಂದು ಕೀಲಿಕೈ ನೀಡಿದ್ದಾನೆ. ಅಲ್ಲದೆ ಬ್ರಿಮ್ಸ್ ಅವ್ಯವಸ್ಥೆ ನೋಡಿ ಸಾಕಾಗಿದೆ ಎಂದು ಸಚಿವರ ಬಳಿ ದೂರಿದ್ದಾನೆ. ಇದನ್ನು ಕಂಡು ಕಕ್ಕಾಬಿಕ್ಕಿಯಾದ ಶಿವಾನಂದ ಪಾಟೀಲ್ ಅವರು, ಇಲ್ಲಾ ಸರಿಪಡಿಸುತ್ತೇವೆ ಎಂದು ವ್ಯಕ್ತಿಯನ್ನು ಸಮಾಧಾನ ಮಾಡಿ, ಮುಜುಗರದಿಂದಲೇ ಕಾರು ಹತ್ತಿ ಹೋದರು.