ಬೆಂಗಳೂರು: ವಿವಿಧ ವಸತಿ ಯೋಜನೆಯಡಿ ಸರ್ಕಾರ ಕೊಡುವ ಸಹಾಯಧನವನ್ನ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ಆದಷ್ಟು ಬೇಗ ಸಹಾಯಧನ ಹೆಚ್ಚಳಕ್ಕೆ ನಿರ್ಧಾರ ಮಾಡುವುದಾಗಿ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed) ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಡಿ.ಟಿ.ಶ್ರೀನಿವಾಸ್ ವಸತಿ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. 2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ವಸತಿ ಯೋಜನೆಯಡಿ ಒಂದೇ ಒಂದು ಮನೆ ಹಂಚಿಕೆ ಮಾಡಿಲ್ಲ. 2024-25ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿ ಪ್ರಗತಿಯಲ್ಲಿರುವ ಮನೆಗಳನ್ನು ಒಳಗೊಂಡಂತೆ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ನಿರ್ಧಾರ ಮಾಡಲಾಗಿತ್ತು. ಈವರೆಗೂ 1,49,521 ಮನೆಗಳನ್ನ ಪೂರ್ಣಗೊಳಿಸಲಾಗಿದೆ ಎಂದರು. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸರ್ಕಾರದ ವೇತನ; ಸಮಿತಿ ರದ್ದಿಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ(ಗ್ರಾಮೀಣ) ರಾಜ್ಯಕ್ಕೆ 7.03 ಲಕ್ಷ ಮನೆ ಗುರಿ ಹಂಚಿಕೆ ಮಾಡಲಾಗಿದೆ. ಈವರೆಗೆ 1.17 ಲಕ್ಷ ಫಲಾನುಭವಿಗಳನ್ನು ಆಯ್ಕೆ ಮಾಡಿ ಮಂಜೂರು ಮಾಡಲಾಗಿದೆ. ಬಾಕಿ ಮನೆಗಳ ಹಂಚಿಕೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ನನ್ನು ಪೊಲೀಸರ ವಶದಿಂದ ಬಿಡಿಸಲು ಯತ್ನ – ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಅಮನ್ ಸಾವೊ!
ವಿವಿಧ ವಸತಿ ಯೋಜನೆಯಡಿ ನೀಡಲಾಗುತ್ತಿರುವ ಸಹಾಯಧನ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆಯಿದೆ. ಸಿಎಂ ಬಳಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ವಸತಿ ಯೋಜನೆಯಡಿ ನೀಡಲಾಗುತ್ತಿರುವ 1.20 ಲಕ್ಷ ರೂ. ಸಹಾಯಧನ ಸಾಕಾಗುತ್ತಿಲ್ಲ. ಇದನ್ನ ಜಾಸ್ತಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಸಾಮಾನ್ಯ ವರ್ಗಕ್ಕೆ 3 ಲಕ್ಷ ರೂ. ಮತ್ತು ಪರಿಶಿಷ್ಟ ಜಾತಿ-ಪಂಗಡಗಳಿಗೆ 2 ಲಕ್ಷ ರೂ. ಜಾಸ್ತಿ ಮಾಡಲು ಮನವಿ ಮಾಡಿದ್ದೇವೆ. ವಸತಿ ಯೋಜನೆ ಸಹಾಯಧನ ಹೆಚ್ಚಳ ಮಾಡುವ ಇಚ್ಛೆ ಸರ್ಕಾರಕ್ಕಿದೆ ಎಂದು ತಿಳಿಸಿದರು. ಇದನ್ನೂ ಓದಿ: 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ, ಶಕ್ತಿ ಯೋಜನೆಗೆ ಸರ್ಕಾರ 2,000 ಕೋಟಿ ಹಣ ಬಾಕಿ ಕೊಡಬೇಕು: ರಾಮಲಿಂಗಾ ರೆಡ್ಡಿ