ಮೈಸೂರು: ಅಪಘಾತಕ್ಕೆ ಒಳಗಾಗಿ ರಸ್ತೆಯಲ್ಲಿ ಬಿದ್ದು ಜೀವನ್ಮರಣ ನಡೆಸುತ್ತಿದ್ದ ವ್ಯಕ್ತಿಗೆ ಸಹಾಯ ಮಾಡಲು ಮುಂದಾದ ಸಚಿವರನ್ನು ಜನರು ತರಾಟೆ ತೆಗೆದುಕೊಂಡು ಗಾಯಾಳುವಿಗೆ ಸಹಾಯ ಮಾಡಬೇಡಿ ಎಂದು ಅವರಿಗೆ ಏಕವಚನದಲ್ಲಿ ನಿಂದಿಸಿರುವ ಘಟನೆ ಮೈಸೂರಿನಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ಸಚಿವ ಕೃಷ್ಣೇಭೈರೆಗೌಡರು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಸಹಾಯಕ್ಕೆ ಮುಂದಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದವನನ್ನು ಆಸ್ಪತ್ರೆಗೆ ಸೇರಿಸಲು ಯತ್ನಿಸಿದರು. ಆದರೆ ಕೃಷ್ಣೇಭೈರೆಗೌಡರನ್ನು ತಡೆದ ಜನರು ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಬೇಡಿ ಎಂದು ಅವಾಜ್ ಹಾಕಿದ್ದಾರೆ.
ಮೈಸೂರಿನ ಹೆಚ್.ಡಿ ಕೋಟೆಯ ಮಳಲಿ ಗ್ರಾಮದ ಬಳಿ ಎರಡು ಬೈಕ್‍ಗಳ ಅಪಘಾತವಾಗಿ ಮಳಲಿ ಗ್ರಾಮದ ಪುಟ್ಟಸ್ವಾಮಿ ಮೃತಪಟ್ಟಿದ್ದರು. ಮತ್ತೋರ್ವ ಬೈಕ್ ಸವಾರ ದಿವಾಕರ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಜಂಗಲ್ ಲಾಡ್ಜ್ ರೆಸಾರ್ಟ್‍ನಲ್ಲಿ ಕಾರ್ಯಗಾರ ಮುಗಿಸಿ ವಾಪಸ್ಸಾಗುತ್ತಿದ್ದ ಸಚಿವರು ಘಟನೆ ಮಾಹಿತಿ ಪಡೆದು ಕಾರಿನಿಂದ ಇಳಿದು ದಿವಾಕರ್ ನನ್ನು ಆಸ್ಪತ್ರೆಗೆ ಸೇರಿಸಲು ಮುಂದಾದಾಗ ಕೃಷ್ಣೇಭೈರೆಗೌಡರಿಗೆ ಗ್ರಾಮಸ್ಥರೆಲ್ಲ ಅಡ್ಡಿಪಡಿಸಿದರು.
ಯಾಕ್ರಯ್ಯ ಅವನನ್ನ ಬದುಕಿಸೋಕೆ ಬಿಡಿ ಎಂದು ಸಚಿವರು ಹೇಳಿದ್ರೂ ಜನರು ಬಿಡಲಿಲ್ಲ. ದಿವಾಕರ್ ಈ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾನೆ. ಅವನಿಗೆ ಈಗ ಸಹಾಯ ಮಾಡಬೇಡಿ ಎಂದು ಸ್ಥಳೀಯರು ಸಚಿವರಿಗೆ ಹೇಳಿದರು. ಈ ವೇಳೆ ಸಚಿವರ ಆಪ್ತ ಕಾರ್ಯದರ್ಶಿ ಸಚಿವರಿಗೆ ಹೋಗೋಣ ಬನ್ನಿ ಇಲ್ಲಿಂದ ಎಂದ ಹೇಳಿದರು. ಆಗ ಆಪ್ತ ಕಾರ್ಯದರ್ಶಿಯನ್ನು ಸಚಿವರು ಬೈದು ಕಳುಹಿಸಿದರು.
ಕೊನೆಗೆ ಪೊಲೀಸರ ಸಹಾಯದಿಂದ ದಿವಾಕರ್ ನನ್ನು ಸಚಿವರು ಆಸ್ಪತ್ರೆಗೆ ರವಾನಿಸಿ ಬೈಕ್ ಸವಾರನನ್ನು ಬದುಕಿಸಿ ಮಾನವೀಯತೆ ಮೆರೆದಿದ್ದಾರೆ.
https://www.youtube.com/watch?v=_Xc9m3FKWE4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv