ಕೊಪ್ಪಳ: ಸ್ಯಾಂಡಲ್‍ವುಡ್ ಸ್ಟಾರ್ ನಟರ ಮನೆಮೇಲೆ ಐಟಿ ದಾಳಿಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಅಂತ ಪಶುಸಂಗೋಪನಾ ಹಾಗೂ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಮೇಲೆ ಯಾಕೆ ಐಟಿ ದಾಳಿಯಾಗುತ್ತಿಲ್ಲ ಎಂಬುದನ್ನು ಮೋದಿಯವರ ಬಳಿಯೇ ಕೇಳಬೇಕು. ನನ್ನ ಕೇಳಿದ್ರೆ ಏನ್ ಹೇಳಲಿ. ಐಟಿ ಮುಂಚೆಯಿಂದಲೂ ಇದ್ದ ಇಲಾಖೆ. ಈಗ ಅದು ಮೋದಿಯವರ ಕೈಯಲ್ಲಿ ಬಹಳ ವ್ಯತಿರಿಕ್ತವಾಗಿ ಉಪಯೋಗವಾಗುತ್ತಿದೆ. ಈ ಮೂಲಕ ಏನೆಲ್ಲ ಮಾಡೋದಿಕೆ ಸಾಧ್ಯ ಇದೆಯೋ ಅವೆಲ್ಲವನ್ನೂ ಮಾಡುತ್ತಿದ್ದಾರೆ ಅಂತ ಅವರು ಆರೋಪಿದ್ರು.
ಸಿನಿಮಾ ನಟರು ಹೆಚ್ಚೇನಲ್ಲ. ಬರೀ ರಾಜಕಾರಣಿಗಳ ಮೇಲಷ್ಟೇ ಐಟಿ ದಾಳಿಯಾಗಬೇಕಾ ಎಂದು ಪ್ರಶ್ನಿಸಿದ್ರು. ಸಿನಿಮಾ ನಟರು, ವಕೀಲರು, ವೈದ್ಯರ ಮೇಲೂ ಐಟಿ ದಾಳಿಯಾಗುತ್ತದೆ. ಯಾರು ಸಂಪತ್ತು ಜಾಸ್ತಿ ಗಳಿಸಿದ್ದಾರೆ ಅವರ ಮೇಲೆ ರೇಡ್ ಮಾಡುತ್ತಾರೆ. ಬಡವರ ಮೇಲೆ ದಾಳಿ ಮಾಡಕ್ಕಾಗುತ್ತಾ..? ರಾಜಕಾರಣಕ್ಕೂ ಐಟಿ ದಾಳಿಗೂ ಯಾವುದೇ ಸಂಬಂಧವಿಲ್ಲ. ಸಿನಿಮಾ ನಟರ ಮೇಲೆ ಯಾಕೆ ಪಾಪ ರಾಜಕಾರಣ ಮಾಡ್ತಾರೆ ಅಂತ ಅವರು ಸ್ಪಷ್ಟಪಡಿಸಿದ್ರು.
ಕಳೆದ ಎರಡು ದಿನಗಳಿಂದ ನಟರಾದ ಕಿಚ್ಚ ಸುದೀಪ್, ಯಶ್, ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರ ಮನೆಮೇಲೆ ಐಟಿ ದಾಳಿ ನಡೆಸಿತ್ತು. ಪುನೀತ್, ಶಿವರಾಜ್‍ಕುಮಾರ್, ಸುದೀಪ್ ನಿವಾಸದಲ್ಲಿ ಪರಿಶೀಲನೆ ಅಂತ್ಯಗೊಂಡಿದೆ. ನಿರ್ಮಾಪಕರಾದ ವಿಜಯ ಕಿರಗಂದೂರು, ಸಿ.ಆರ್.ಮನೋಹರ್, ರಾಕ್‍ಲೈನ್ ವೆಂಕಟೇಶ್, ಜಯಣ್ಣ ಮನೆಯಲ್ಲಿ ಪರಿಶೀಲನೆ ಮುಂದುವರಿಯುತ್ತಿದೆ.
ಸ್ಟಾರ್ ನಟರ ಮನೆಯಲ್ಲಿ ಕೆಜಿಗಟ್ಟಲೆ ಬೆಳ್ಳಿ, ಚಿನ್ನ ಮತ್ತು ಹಣ ಪತ್ತೆಯಾಗಿದೆ. ಈ ಬಂಗಾರ ಮತ್ತು ಹಣಕ್ಕೆ ಸೂಕ್ತ ದಾಖಲೆ ತೋರಿಸಿದ ನಂತರವಷ್ಟೇ ಈ ಆಸ್ತಿಗಳು ಮನೆ ಸೇರಲಿದೆ. ಇದರ ಜೊತೆ ಸಾಕಷ್ಟು ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡಿರುವ ಕಾರಣ ಎಲ್ಲದಕ್ಕೂ ದಾಖಲೆ ನೀಡಬೇಕಾಗುತ್ತದೆ. ಈ ಕಾರಣಕ್ಕೆ ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ಒಂದು ವಾರದ ಗಡುವನ್ನು ಸ್ಟಾರ್ ನಟರು ಕೇಳಿದ್ದಾರೆ ಎನ್ನುವ ಮಾಹಿತಿ ಐಟಿ ಮೂಲಗಳಿಂದ ಸಿಕ್ಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv