ಬೆಂಗಳೂರು: ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದ ಸಚಿವ ಉಮೇಶ್ ಕತ್ತಿ (61) ಅವರಿಂದು ವಿಧಿವಶರಾಗಿದ್ದಾರೆ.
ಇಲ್ಲಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದಾಗ ಅವರಿಗೆ ರಾತ್ರಿ 10 ಗಂಟೆ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
1961 ಮಾರ್ಚ್ 14ರಂದು ಬೆಳಗಾವಿ ಜಿಲ್ಲೆಯಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ಕತ್ತಿ, ರಾಜಕಾರಣಿ, ಕೃಷಿಕ, ಉದ್ಯಮಿ ಆಗಿಯೂ ಸಾರ್ಥಕ ಜೀವನ ನಡೆಸಿದ್ದಾರೆ.
ಉಮೇಶ್ ಕತ್ತಿ ಅವರಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಉಮೇಶ್ ಕತ್ತಿ ನಿಧನರಾದ ವಿಷಯ ತಿಳಿಯುತ್ತಿದ್ದಂತೆ ಸಿಎಂ ಬೊಮ್ಮಾಯಿ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.
ಸಚಿವ ಉಮೇಶ್ ಕತ್ತಿ 9 ಬಾರಿ ಚುನಾವಣೆಗೆ ಸ್ಪರ್ಧಿಸಿ, 8 ಬಾರಿ ಗೆಲುವು ಕಂಡಿದ್ದರು. 800 ಮತಗಳ ಅಂತರದಲ್ಲಿ ಒಂದು ಬಾರಿ ಸೋತಿದ್ದರು. 6 ಬಾರಿ ಪಕ್ಷವನ್ನು ಬದಲಾವಣೆ ಮಾಡಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ, ನಾನು ಸಹ ಮುಖ್ಯಮಂತ್ರಿಯಾಗುತ್ತೇನೆ ಎಂಬ ಹೇಳಿಕೆಗಳಿಂದ ಪ್ರಸಿದ್ಧಿ ಪಡೆದಿದ್ದರು. 1996 ರಲ್ಲಿ ಮೊದಲ ಬಾರಿಗೆ ಸಚಿವ ಅಲಂಕರಿಸಿದ ಕತ್ತಿ ಅಂದು ಮೊದಲಿಗೆ ಸಕ್ಕರೆ ಸಚಿವ ಖಾತೆಯ ಹೊಣೆ ಹೊತ್ತಿದ್ದರು.