ಬಿಜೆಪಿಯವರು ಸರ್ಕಾರ ಕೆಡವಲು ಟೆಸ್ಟ್ ಮ್ಯಾಚ್ ಆಡಿದ್ರು, ನಾವು ಒನ್ ಡೇ ಮ್ಯಾಚ್ ಆಡಿ ಉಳಿಸಿಕೊಂಡ್ವಿ: ಯು.ಟಿ.ಖಾದರ್

Public TV
2 Min Read
u.t. khader

ಶಿವಮೊಗ್ಗ: ಬಿಜೆಪಿಯವರು ಮೈತ್ರಿ ಸರ್ಕಾರವನ್ನು ಕೆಡವಲು ಟೆಸ್ಟ್ ಮ್ಯಾಚ್ ಆಡಿದರು. ಆದರೆ ನಾವು ಒನ್ ಡೇ ಮ್ಯಾಚ್ ಆಡಿ ಸರ್ಕಾರವನ್ನು ಉಳಿಸಿಕೊಂಡಿದ್ದೇವೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರದಲ್ಲಿ ನಡೆದ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಯಶಸ್ವಿಯಾಗಲ್ಲವೆಂದು ತೋರಿಸಲು ಬಿಜೆಪಿಯವರು ಪ್ಲಾನ್ ಮಾಡಿದ್ದರು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಬೆಂಬಲದಿಂದ ರಾಜ್ಯ ನಾಯಕರು ಆಪರೇಷನ್ ಕಮಲ ಆರಂಭಿಸಿದ್ದರು. ಆದರೆ ಅವರ ಪ್ರಯತ್ನ ವಿಫಲವಾಯಿತು ಎಂದು ವ್ಯಂಗ್ಯವಾಡಿದರು.

u.t. khader K. S. Eshwarappa

ಮೈತ್ರಿ ಸರ್ಕಾರ ಉರುಳಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ ವಿಫಲವೆಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತಿತ್ತು. ಒಂದು ವೇಳೆ ಸರ್ಕಾರ ಬಿದ್ದುಹೋಗಿದ್ದರೆ ಅದನ್ನೇ ಲೋಕಸಭಾ ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದರು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿಯವರು ಸಂವಿಧಾನ ವಿರೋಧಿ ನೀತಿ ಅನುಸರಿಸಿ ರಾಜ್ಯದ ಜನತೆಯ ಛೀಮಾರಿಗೆ ಒಳಗಾಗಿದ್ದಾರೆ. ಪ್ರತಿಪಕ್ಷವಾಗಿ ಬಜೆಟ್ ಮೇಲಿನ ಚರ್ಚೆ ಮಾಡದೇ ಸದನದಿಂದ ಹೊರ ಹೋದರು. ರಾಜ್ಯದ ಪ್ರಗತಿಯಲ್ಲಿ ಮಹತ್ವದ ಪಾತ್ರವಹಿಸುವ ಬಜೆಟ್‍ನ್ನು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಚರ್ಚೆ ನಡೆಯದೇ ಅಂಗೀಕರಿಸಲಾಗಿದೆ ಎಂದರು.

u.t. khader

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಪೂರ್ಣ ವಿಫಲವಾಗಿದೆ. ದೇಶದ ಹಿತ ಕಾಯುವಲ್ಲಿ ಸೋತಿದೆ. ದೇಶದ ಭವಿಷ್ಯಕ್ಕಾಗಿ ಮಾಡಿರುವ ಕೆಲಸಗಳು ಏನು ಎಂಬುದನ್ನು ಬಿಜೆಪಿಯವರು ತೋರಿಸಲಿ. ನೀತಿ ಆಯೋಗದ ಅಧ್ಯಕ್ಷರು ಹಾಗೂ ರಿಸರ್ವ್ ಬ್ಯಾಂಕ್ ಅಧ್ಯಕ್ಷರು ರಾಜೀನಾಮೆ ನೀಡಿದ್ದೇಕೆ? ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪತ್ರಿಕಾಗೋಷ್ಠಿ ಮಾಡಿದ್ದೇಕೆ ಎನ್ನುವುದಕ್ಕೆ ಪ್ರಧಾನಿ ಮೋದಿ ಉತ್ತರಿಸಲಿ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಒಬ್ಬ ಸೈನಿಕನ ತಲೆ ಹೋದರೆ ಪಾಕಿಸ್ತಾನದವರ ಹತ್ತು ತಲೆ ತರುವೆನೆಂದು ಕಳೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಈಗ ಆ ಮಾತು ಮರೆತಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆ ಮೋದಿ ನಿರ್ಧಾರ ತೆಗೆದುಕೊಳ್ಳಬೇಕು. ಆ ರೀತಿಯ ಧೈರ್ಯತೋರಿ ದೇಶಕ್ಕೆ ದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಪುಲ್ವಾಮಾ ದಾಳಿಯ ಪ್ರತಿಕಾರಕ್ಕೆ ಒತ್ತಾಯಿಸಿದರು.

u.t. khader 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *