-ನಾಲ್ಕು ಗ್ರಾಮಗಳಿಗೆ ಶುದ್ಧ ನೀರು ಸರಬರಾಜು ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ
-ಗ್ರಾಮಸ್ಥರ ಆರೋಗ್ಯ ಪರಿಶೀಲಿಸಿ ಚಿಕಿತ್ಸೆ ನೀಡಲು ಇಲಾಖೆಗೆ ಆದೇಶ
ರಾಯಚೂರು: ಕೃಷ್ಣಾ ನದಿ ನೀರನ್ನ ಬಳಸಿ ಚರ್ಮರೋಗಕ್ಕೆ ತುತ್ತಾಗಿರುವ ರಾಯಚೂರಿನ ನಾಲ್ಕು ಗ್ರಾಮಗಳ ಜನರ ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಸ್ಪಂದಿಸಿದ್ದಾರೆ. ನದಿಯ ಕಲುಷಿತ ನೀರಿನಿಂದ ಚರ್ಮರೋಗ ಉಲ್ಬಣಗೊಂಡಿರುವ ಆತ್ಕೂರು, ಸರ್ಜಾಪೂರ, ರಾಂಪುರ, ಬೂರ್ದಿಪಾಡ ಗ್ರಾಮಗಳಿಗೆ ಶುದ್ಧ ನೀರನ್ನ ಸರಬರಾಜು ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವರದಿಯನ್ನ ಸಲ್ಲಿಸಲು ಹಾಗೂ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿರುವ ಸಚಿವರು, ನದಿ ತಟದ ಗ್ರಾಮಗಳ ಜನರ ಸಮಸ್ಯೆಗೆ ಪರಿಹಾರ ಕಂಡುಕೊಡುವುದಾಗಿ ಹೇಳಿದ್ದಾರೆ.
Advertisement
Advertisement
ಈ ಗ್ರಾಮಗಳಲ್ಲಿನ ಜನ ನದಿಯಲ್ಲಿ ನಿಂತ ಕಲುಷಿತ ನೀರನ್ನ ಕುಡಿಯುತ್ತಿರುವುದರಿಂದ ಪಾಚಿ ಹಾಗೂ ಫಂಗಸ್ ಹೆಚ್ಚಾಗಿ ಚರ್ಮರೋಗಗಳು ಕಾಣಿಸಿಕೊಳ್ಳುತ್ತಿವೆ. ಮೊದಲೇ ಅಂಟುರೋಗವಾಗಿರುವುದರಿಂದ ಬೇಸಿಗೆಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಈ ಸೂಕ್ಷ್ಮಜೀವಿಗಳು ಔಷಧಿ ನಿರೋಧಕ ಶಕ್ತಿಯನ್ನ ಹೆಚ್ಚಿಕೊಂಡಿರುವುದರಿಂದ ಬೇಗ ಗುಣಮುಖವಾಗುತ್ತಿಲ್ಲ. ಚರ್ಮರೋಗದಿಂದ ಸಂಪೂರ್ಣ ಗುಣಮುಖರಾಗಲು ಕನಿಷ್ಠ ಮೂರು ತಿಂಗಳ ಚಿಕಿತ್ಸೆ ಬೇಕು. ಆದ್ರೆ ನೀರಿನ ಪರ್ಯಾಯ ಮೂಲವಿಲ್ಲದೆ ರೋಗಕ್ಕೆ ಮದ್ದಿಲ್ಲ ಅಂತ ಚರ್ಮರೋಗ ತಜ್ಞ ಡಾ. ಕಲ್ಲಪ್ಪ ಹೇಳಿದ್ದಾರೆ.
Advertisement
ಇದನ್ನೂ ಓದಿ: ರಾಯಚೂರು: ಕಲುಷಿತ ನೀರು ಕುಡಿದು ಚರ್ಮ ರೋಗಕ್ಕೆ ತುತ್ತಾದ ಗ್ರಾಮಸ್ಥರು
Advertisement
ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿರುವ ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ಕೇವಲ ನಾಲ್ಕು ಗ್ರಾಮಗಳು ಮಾತ್ರವಲ್ಲ ನದಿ ತಟದ 32 ಹಳ್ಳಿಗಳಲ್ಲಿ ಸಮಸ್ಯೆಯಿದೆ. ಆರ್‍ಟಿಪಿಎಸ್, ವೈಟಿಪಿಎಸ್ ಹಾಗೂ ಖಾಸಗಿ ಕಾರ್ಖಾನೆಗಳೇ ಇದಕ್ಕೆ ಕಾರಣ. ಎಷ್ಟು ಬಾರಿ ಮನವಿ ಮಾಡಿದ್ರೂ ಸರ್ಕಾರ ಸ್ಪಂದಿಸುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಗೂ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಕಲುಷಿತ ನೀರಿನಿಂದ ರೋಗಗಳಿಗೆ ತುತ್ತಾಗಿರುವ ಗ್ರಾಮಗಳಿಗೆ ಶುದ್ಧ ನೀರನ್ನ ಸರಬರಾಜು ಮಾಡಲು ಕೂಡಲೇ ಕ್ರಮಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ.