ಉಡುಪಿ: ನಿಯಮಾವಳಿ ಮತ್ತು ಕೋರ್ಟ್ ಆದೇಶದ ಪ್ರಕಾರ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿಗೆ ಅವಕಾಶವಿಲ್ಲ. ಅವಕಾಶ ಇಲ್ಲದ ಕಾರಣ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಸಾಧ್ಯವಾಗಿಲ್ಲ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್ ನಿಧನ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ಸರ್ಕಾರ ಎಲ್ಲ ಎಚ್ಚರಿಕೆಗಳನ್ನು ತೆಗೆದುಕೊಂಡು ಶ್ರದ್ಧಾಂಜಲಿ ಅರ್ಪಿಸಿದೆ. ಪುನೀತ್ ರಾಜಕುಮಾರ್ ಅವರಿಗೆ ರಾಜ್ಯೋತ್ಸವ ಕೊಡಬೇಕು ಎಂಬ ಮಾತು ಎಲ್ಲಾ ಕಡೆಗಳಿಂದ ಕೇಳಿಬಂತು. ಆದರೆ ಅದಕ್ಕೆ ಅವಕಾಶ ಇಲ್ಲದ ಕಾರಣ ಈ ಬೇಡಿಕೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು
ಮುಂದಿನ ದಿನಗಳಲ್ಲಿ ಪುನೀತ್ ರಾಜಕುಮಾರ್ ಸೇವೆಯನ್ನು ಪರಿಗಣಿಸುತ್ತೇವೆ. ಯಾವ ರೀತಿಯ ಗೌರವ ಕೊಡಬೇಕು ಎಂದು ಸರ್ಕಾರ ತೀರ್ಮಾನ ಮಾಡುತ್ತದೆ. ಈಗಲೇ ಯಾವುದೇ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ದೀಪಾವಳಿ ನಂತರ ಸಭೆ ನಡೆಸಿ ಗೌರವ ಸಲ್ಲಿಕೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇವರು ಎಂದು ನಾವು ತಿಳಿದುಕೊಂಡಿದ್ದೆವು, ನಮ್ಮ ನೋವನ್ನು ಯಾರ ಬಳಿ ಹೇಳೋದು: ಸೆಕ್ಯೂರಿಟಿ ಕಣ್ಣೀರು
ಪುನೀತ್‍ಗೆ ವಿಶೇಷ ಗೌರವ ಕೊಡಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ರಾಜ್ಯ ಸರ್ಕಾರದ ಜಾಹಿರಾತುಗಳಿಗೆ ಪುನೀತ್ ಸಂಭಾವನೆ ಪಡೆಯುತ್ತಿರಲಿಲ್ಲ. ಎಲ್ಲವೂ ಸರ್ಕಾರದ ಗಮನದಲ್ಲಿದೆ. ಸೂಕ್ತ ಗೌರವ, ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸುತ್ತೇವೆ. ಕಾರ್ಯಕ್ರಮದ ಚೌಕಟ್ಟಿನ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.