ಬೆಂಗಳೂರು: ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೂ ಕಲ್ಲಿದ್ದಲು ಕೊರತೆ ಉಂಟಾಗಿ ಕರ್ನಾಟಕ ಕಗ್ಗತ್ತಲಲ್ಲಿ ಮುಳುಗಬಹುದು ಎಂಬ ಆತಂಕ ಎದುರಾಗಿದೆ. ರಾಜ್ಯಕ್ಕೆ ಶೇಕಡಾ 45ರಷ್ಟು ವಿದ್ಯುತ್ ಪೂರೈಕೆ ಮಾಡುವ ರಾಯಚೂರಿನ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎಂಟು ಘಟಕಗಳಲ್ಲಿ ನಾಲ್ಕು ಘಟಕಗಳು ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ.
1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯದ ಆರ್ ಟಿಪಿಎಸ್ ಕೇವಲ 500 ಮೆಗಾವ್ಯಾಟ್‍ನಷ್ಟು ವಿದ್ಯುತ್ ಉತ್ಪಾದಿಸ್ತಿದೆ. ಆರ್‍ಟಿಪಿಎಸ್‍ನಲ್ಲಿ ದಿನಕ್ಕೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್ ಕೋಲ್ ಗಣಿಯಿಂದ ದಿನಕ್ಕೆ 8 ರಿಂದ 9 ರೇಕ್ ಕಲ್ಲಿದ್ದಲು ಬರುತ್ತಿತ್ತು. ಆದ್ರೆ ಈಗ ಕೇವಲ 3- 4 ರೇಕು ಕಲ್ಲಿದ್ದಲು ಬರುತ್ತಿದೆ. ಇದನ್ನೂ ಓದಿ: ರಾಜ್ಯದ ಶಾಖೋತ್ಪನ್ನ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆ – ವಿದ್ಯುತ್ ಅಭಾವದ ಆತಂಕ
ಬಳ್ಳಾರಿಯ ಕುಡಿತಿನಿ ಬಳಿ ಇರುವ ಬಿಟಿಪಿಎಸ್ ಶಾಖೋತ್ಪನ್ನ ಸ್ಥಾವರದಲ್ಲೂ ಕಲ್ಲಿದ್ದಲು ಕೊರತೆ ಉಂಟಾಗಿದೆ. 1700 ಮೆಗಾ ವ್ಯಾಟ್ ಸಾಮಥ್ರ್ಯದ ಬಿಟಿಪಿಎಸ್ ಗೆ ದಿನಕ್ಕೆ 25 ಸಾವಿರ ಟನ್ ಕಲ್ಲಿದ್ದಲು ಬೇಕು. ಆದರೆ ಅಧಿಕಾರಿಗಳು ಹೇಳುವ ಪ್ರಕಾರ ಬಿಟಿಪಿಎಸ್ ನಲ್ಲಿ ಕೇವಲ 15 ಸಾವಿರ ಟನ್ ಸ್ಟಾಕ್ ಇದೆ. ಅಲ್ಲದೇ ಇರುವ ಮೂರು ಘಟಕಗಳಲ್ಲಿ ಎರಡು ಘಟಕ, ಕಲ್ಲಿದ್ದಲು ಸಮಸ್ಯೆ ಹಿನ್ನೆಲೆಯಲ್ಲಿ ಈಗಾಗಲೇ ಬಂದ್ ಮಾಡಲಾಗಿದೆ. ಇನ್ನು ಉಳಿದ ಒಂದು ಘಟಕಕ್ಕೆ ಇವತ್ತೊಂದು ದಿನ ಒಂದೇ ಘಟಕ ನಡೆಯುವಷ್ಟು ಕಲ್ಲಿದ್ದಲಿದೆ. ನಾಳೆಗೆ ಸಂಪೂರ್ಣ ಖಾಲಿಯಾಗಿ ಬಿಟಿಪಿಎಸ್ ಸ್ಥಬ್ದವಾಗೋ ಸಾಧ್ಯತೆ ಹೆಚ್ಚಿದೆ.
ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆ ಆಗಲ್ಲ: ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಸಚಿವ ಸುನೀಲ್ ಕುಮಾರ್, ಇಡೀ ದೇಶದಲ್ಲಿ ಕಲ್ಲಿದ್ದಲ್ಲಿನ ಉತ್ಪಾದನೆಯಲ್ಲಿ ಕೊರತೆಯಾಗಿದೆ. ಕರ್ನಾಟಕಕ್ಕೆ ತಲುಪಬೇಕಾಗಿದ್ದ ಕಲ್ಲಿದ್ದಲಿನ ಕೊರತೆಯಾಗಿದೆ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಗಮನಕ್ಕೆ ತಂದಿದ್ದೇವೆ. ಒಟ್ಟು 14 ರೇಕ್ ಕಲ್ಲಿದ್ದಲು ಒಟ್ಟು ಕೇಳಿದ್ದೇವೆ. ಒರಿಸ್ಸಾದಿಂದ 2 ರೇಕ್ ಕೇಳಿದ್ದೇವೆ. ಇಂದು ಸಂಜೆಯೊಳಗೆ ಒಂದು ರೇಕ್, ನಾಳೆ ಸಂಜೆಯೊಳಗೆ ಇನ್ನೊಂದು ರೇಕ್ ಬರಲಿದೆ ಎಂದು ಸಚಿವರು ಹೇಳಿದ್ದಾರೆ. ರಾಯಚೂರು ನಲ್ಲಿ ಉತ್ಪಾದನೆ ಕಡಿಮೆ ಮಾಡಿದ್ದೇವೆ. ಇಂದು ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆ ಆಗಲಾರದು. ನವರಾತ್ರಿ ಹಬ್ಬದ ಸಂದರ್ಭದಲ್ಲಿ ದೀಪಾಲಂಕರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತೆ. ಹೀಗಾಗಿ ಈ ಸಂದರ್ಭದಲ್ಲಿ ಯಾವ ರೀತಿಯೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಉಹಾಪೋಹಾ ಆತಂಕ ಪಡೋದು ಬೇಡ. ರಾಯಚೂರಲ್ಲಿ ಉತ್ಪಾದನೆ ಕಡಿಮೆ ಮಾಡಿದ್ದೇವೆ. ಇದು ಪರಿಸ್ಥಿತಿ ಸುಧಾರಿಸಲಿದೆ ಎಂದು ಸಚಿವರು ಭರವಸೆ ನೀಡಿದರು.