ಉಡುಪಿ: ನಗರದ ಜೀವನದಿ ಸ್ವರ್ಣೆಗೆ ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ದಂಪತಿ ಬಾಗಿನ ಅರ್ಪಿಸಿದರು. ಬಳಿಕ ಶೀಂಬ್ರ ಸಿದ್ಧಿವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟಿ ಉಡುಪಿ ನಗರದ ಜನರ ಜೀವನಾಡಿಯಾಗಿರುವ ಸ್ವರ್ಣ ನದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಕೆ ಮಾಡಿದರು. ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಹ ಏರ್ಪಡಿಸಲಾಗಿತ್ತು. ಸಚಿವ ಸುನಿಲ್ ಕುಮಾರ್ ಪತ್ನಿ ಪ್ರಿಯಾಂಕಾ ಜೊತೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಸ್ವರ್ಣ ನದಿ ತಟದಲ್ಲಿ ಸುನಿಲ್ ಕುಮಾರ್ ದಂಪತಿ ಹಾಗೂ ಶಾಸಕ ರಘುಪತಿ ಭಟ್ ದಂಪತಿ ದೇವರಿಗೆ ಅರಶಿಣ, ಕುಂಕುಮ ಮಾಂಗಲ್ಯ ಸೀರೆ ಗಳನ್ನು ಅರ್ಪಣೆ ಮಾಡಿ ಆರತಿ ಎತ್ತಿ ಪೂಜಿಸಿದರು. ಇದನ್ನೂ ಓದಿ: ಜಾಲಿ ಮೂಡ್‍ನಲ್ಲಿ ಸಿದ್ದರಾಮಯ್ಯ- ದೆಹಲಿಯಲ್ಲಿ ಫುಲ್ ಶಾಪಿಂಗ್
ಈ ಬಾರಿ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಜನರಿಗೆ ಕುಡಿಯುವ ನೀರಿನ ಅಭಾವ ಬರುವುದಿಲ್ಲ. ಮುಂದಿನ ವರ್ಷದೊಳಗೆ ಭಕ್ತರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಮಾಡುತ್ತದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸ್ನಾನ ಘಟ್ಟವನ್ನು ನಿರ್ಮಾಣ ಮಾಡುತ್ತೇವೆ ಎಂದರು.
ಪ್ರಕೃತಿಯನ್ನು ಪೂಜಿಸಿ ಆರಾಧಿಸುವುದು ಭಾರತೀಯ ಸಂಪ್ರದಾಯ. ನದಿ, ಬೆಟ್ಟ ಪ್ರಕೃತಿಯ ಬಗ್ಗೆ ನಮಗೆ ಪೂಜನೀಯ ಭಾವನೆ ಇದೆ. ನದಿಗಳು ವರ್ಷ ಪೂರ್ತಿ ಹರಿಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಕುಡಿಯಲು ಮತ್ತು ಕೃಷಿ ಚಟುವಟಿಕೆಗಳು ನಡೆಯಲು ಹಾಗೂ ಜಲಚರಗಳಿಗೆ ವರ್ಷಪೂರ್ತಿ ನದಿ ತುಂಬಿ ಹರಿಯಲಿ. ಸಮೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಡಿಸಿ ಕೂರ್ಮಾರಾವ್, ಎಸ್.ಪಿ ವಿಷ್ಣುವರ್ಧನ್, ನಗರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.