ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರು ರಾತ್ರಿ 10 ಗಂಟೆಯ ನಂತರ ಕಣ್ಮುಚ್ಚಿ ಮಲಗಿ ಒಂದು ಬಾರಿ ಎಲ್ಲವನ್ನೂ ನೆನಪಿಸಿಕೊಳ್ಳಲಿ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯ ಕೆಡವಿದ್ದಾರೆ ಎಂಬ ಹೆಚ್‍ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಏಕೆ ಪತನವಾಯ್ತು ಎಂಬುದು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಹೀಗಾಗಿ ಅವರು ಕುಮಾರಸ್ವಾಮಿ ರಾತ್ರಿ 10 ಗಂಟೆ ನಂತರ ಕಣ್ಮುಚ್ಚಿ ಮಲಗಿ ಎಲ್ಲವನ್ನೂ ನೆನಪಿಸಿಕೊಳ್ಳಲಿ. ಆಗ ಅವರಿಗೆ ಎಲ್ಲಾ ಸತ್ಯವೂ ಅರ್ಥವಾಗುತ್ತದೆ ಎಂದರು.
ಸಿದ್ದರಾಮಯ್ಯ ಎಂದಿಗೂ ನಮ್ಮನ್ನು ಪಕ್ಷದಿಂದ ಹೊರ ಹೋಗಿ ಎಂದು ಹೇಳಿಲ್ಲ. ಆದರೆ ಸರ್ಕಾರ ಏಕೆ ಬಿತ್ತು ಎಂಬುದು ಕುಮಾರಸ್ವಾಮಿಗೆ ಗೊತ್ತಿದೆ. ಎರಡು ವರ್ಷದ ನಂತರ ಮತ್ತೆ ಏಕೆ ಈ ವಿಚಾರ ಚರ್ಚೆ ಮಾಡುತ್ತಿದ್ದೀರಿ. ನಮಗೂ ಎರಡು ವರ್ಷದಿಂದ ಹೇಳಿ ಹೇಳಿ ಸಾಕಾಗಿದೆ. ಇನ್ನು ಈ ವಿಚಾರದ ಚರ್ಚೆ ಬೇಡ ಎಂದು ಹೇಳಿದರು. ಇದನ್ನೂ ಓದಿ: ಇಂದು, ನಾಳೆ ಚಾಮುಂಡಿ ಬೆಟ್ಟ ಓಪನ್: ಎಸ್.ಟಿ.ಸೋಮಶೇಖರ್
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸ್ವಪಕ್ಷಿಯರ ಭ್ರಷ್ಟಾಚಾರ ಆರೋಪ ಸಂಬಂಧ ಮಾತನಾಡಿ, ಇದು ನಿಶ್ಚಿತವಾಗಿ ಒಂದು ಷಡ್ಯಂತ್ರ. ಮೊದಲಿನಿಂದಲೂ ನಾನು ಹೇಳುತ್ತಿದ್ದೇನೆ. ಮೊದಲಿನಿಂದಲೂ ಡಿ ಕೆ ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ನಡೆಯುತ್ತಿದೆ. ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಷಡ್ಯಂತ್ರ ನಡೆಸುತ್ತಿದ್ದಾರೆ. ಇದು ಈಗ ಮುಂದುವರಿದಿದೆ. ನನಗೆ ಪರ್ಸಂಟೇಜ್ ವ್ಯವಹಾರದ ಬಗ್ಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಬರಿ ಶಾಸಕನಾಗಿದ್ದೆ ಅಷ್ಟೆ ಎಂದು ತಿಳಿಸಿದ್ದಾರೆ.