ಕೊಡಗಿನಲ್ಲಿ ವಾರದ 4 ದಿನಗಳು ಮಾತ್ರ ಅಂಗಡಿಗಳು ಓಪನ್

Public TV
2 Min Read
MDK SOMANNA

ಮಡಿಕೇರಿ: ಜಿಲ್ಲೆಯಲ್ಲಿ ಬೆಳಗ್ಗೆ 6 ರಿಂದ 4 ಗಂಟೆವರೆಗೆ ಅಗತ್ಯ ವಸ್ತುಗಳನ್ನು ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೊವೀಡ್-19 ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಸೋಮಣ್ಣ, ಜಿಲ್ಲೆ ಕೊರೊನಾ ವಿಷಯದಲ್ಲಿ ಹಸಿರು ವಲಯದಲ್ಲಿ ಇರುವುದರಿಂದ ವಾರದಲ್ಲಿ 4 ದಿನಗಳು ಅಂದರೆ ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಗ್ಗೆ 6 ರಿಂದ 4 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ತಿಳಿಸಿದರು.

mdk 7

ಸಂತೆ, ಜಾತ್ರೆ, ಪ್ರವಾಸಿ ತಾಣಗಳು, ಚರ್ಚ್, ಮಸೀದಿ, ಪ್ರಾರ್ಥನಾ ಮಂದಿರಗಳು ಹಾಗೆಯೇ ಮದ್ಯ ಸೇರಿದಂತೆ ತಂಬಾಕು ಉತ್ಪನ್ನಗಳು ಎಂದಿನಂತೆ ಸಂಪೂರ್ಣ ಬಂದ್ ಆಗಿರಲಿವೆ. ಹೋಟೆಲ್‍ಗಳಲ್ಲಿ ಕೇವಲ ಪಾರ್ಸೆಲ್ ವ್ಯವಸ್ಥೆ ಇರಲಿದೆ. ಜಿಲ್ಲಾಡಳಿತ, ಶಾಸಕರು ಹಾಗೂ ಜನಪ್ರತಿನಿಧಿಗಳ ದೂರ ದೃಷ್ಟಿ ಚಿಂತನೆ, ಮುಂದಾಲೋಚನೆಯಿಂದ ಜಿಲ್ಲೆಯಲ್ಲಿ ಪ್ರಾರಂಭವಾದ ಒಂದು ಕೊರೊನಾ ಪ್ರಕರಣವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸೋಮಣ್ಣ ಹೇಳಿದರು.

ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡದಲ್ಲಿ ಅಂಗಡಿ ಮತ್ತು ಕೈಗಾರಿಕೆಗೆ ಅನುಮತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರಕ್ಕೆ ಬಿಡಲಾಗಿದೆ.

MDK 2 3

ಇದೇ ವೇಳೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕೆಲವೇ ದಿನಗಳಲ್ಲಿ ಮಳೆ ಪ್ರಾರಂಭವಾಗಲಿದೆ. ನದಿಗಳಲ್ಲಿ ಹೂಳು ತುಂಬಿದೆ. ಕಳೆದೆರಡು ವರ್ಷಗಳಿಂದ ಸುರಿದ ಮಳೆಯಿಂದ ಕುಶಾಲನಗರ ಭಾಗದಲ್ಲಿ ತೀರ ಸಂಕಷ್ಟ ಎದುರಿಸುವಂತಾಗಿತ್ತು. ಆದ್ದರಿಂದ ಸಚಿವರು ಹೊಲ, ಗದ್ದೆಗಳಲ್ಲಿ ತುಂಬಿರುವ ಮರಳನ್ನು ತೆಗೆಯಲು ಆದೇಶ ನೀಡಬೇಕು. ಕೆಲವರು ಮನೆಗಳಿಗೆ ಜೆಲ್ಲಿ, ಎಂ.ಸ್ಯಾಂಡ್ ತೆಗೆಯಲು ಅನುಮತಿ ಕೊಡುತ್ತಿಲ್ಲ ಎಂದರು.

ಮಳೆಗಾಲ ಸಮೀಪದಲ್ಲಿದೆ. ಸರ್ಕಾರವೇ ಅಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಟ್ಟಿರುವುದರಿಂದ ಮನೆಗಳ ನಿರ್ಮಾಣಕ್ಕೆ ಸಮಸ್ಯೆ ಕೊಡಬೇಡಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗೆ ಸಚಿವ ಸೊಮಣ್ಣ ತಾಕೀತು ಮಾಡಿದರು.

MDK 1 6

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯ ಹಲವು ಕಾಮಗಾರಿಗಳನ್ನು ಮೈಸೂರಿನವರಿಗೆ ಕೊಡಲಾಗಿದೆ. ಕುಟ್ಟ-ಮಾಕುಟ್ಟ ರಸ್ತೆ ಕೆಲಸವನ್ನು ಮಳೆಗಾಲಕ್ಕೂ ಮೊದಲೇ ಪೂರ್ಣಗೊಳಿಸಬೇಕು. ಕೋ ಆಪರೇಟಿವ್ ಸೊಸೈಟಿಗಳಲ್ಲಿ ಸರ್ಕಾರ 1 ಲಕ್ಷದವರಗೆ ಸಾಲ ಮನ್ನಾ ಮಾಡಿದೆ. ಆದರೆ ಈ ಯೋಜನೆ ಜಿಲ್ಲೆಯಲ್ಲಿ ಹಲವರಿಗೆ ತಲುಪಿಲ್ಲ. ಹಲವೆಡೆ ಉತ್ತಮ ಬಾಳೆ ಬೆಳೆ ಬೆಳೆದಿದ್ದು, ಇದರ ಮಾರಾಟಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸಂಪಾಜೆ ಚೆಕ್‍ಪೋಸ್ಟ್ ಬಳಿ ಕಾಸರಗೋಡು ಭಾಗದಿಂದ ಜಿಲ್ಲೆಯ ಒಳಗೆ ಬರುತ್ತಿದ್ದಾರೆ. ಚೆಕ್‍ಪೋಸ್ಟ್ ಒಳಗೆ ಬರುವ ಮೊದಲು ಗುರುತಿನ ಚೀಟಿ ನೋಡಿ. ಹೊರ ಜಿಲ್ಲೆಗಳಿಂದ ಹಂದಿ ಹಾಗೂ ಮೀನುಗಳನ್ನು ತರಿಸಿಕೊಳ್ಳುವುದು ಬೇಡ. ಈಗಾಗಲೇ ಮಂಗಳೂರಿನಿಂದ ಮೀನುಗಳು ಬರುತ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಶಾಸಕ ಬೋಪಯ್ಯ ಹೇಳಿದರು.

mdk 8

ಅಗತ್ಯ ವಸ್ತುಗಳನ್ನು ಮಾತ್ರ ಚೆಕ್‍ಪೋಸ್ಟ್ ಮೂಲಕ ಬರುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ತರಬೇಕಾದರೆ ಆರೋಗ್ಯ ತಪಾಸಣೆ ದೃಢೀಕರಣ ಪತ್ರ ಪರಿಶೀಲಿಸಲು ಕಷ್ಟ ಆಗುತ್ತದೆ ಎಂದು ಎಸ್‍ಪಿ ಸುಮನ್ ಡಿ.ಪನ್ನೇಕರ್ ತಿಳಿಸಿದರು. ಇದೊಂದು ಸೂಕ್ಷ್ಮ ವಿಚಾರ. ಕೆಲವು ನಿಬಂಧನೆಗಳಿಗೆ ನಾವೂ ಒಳಪಡಬೇಕಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸಹಕರಿಸಬೇಕು. ಎಂದರು.

Share This Article
Leave a Comment

Leave a Reply

Your email address will not be published. Required fields are marked *