ಚಿಕ್ಕಬಳ್ಳಾಪುರ: ಸಚಿವ ಸ್ಥಾನದ ಆಕಾಂಕ್ಷಿಯಾಗಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅತೃಪ್ತಗೊಂಡಿರೋ ಶಾಸಕ ಡಾ.ಕೆ ಸುಧಾಕರ್ ಗೆ ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದವನು. ಯಾರು ಪಕ್ಷ ವಿರೋಧಿ ಅಂತ ಎಲ್ಲರಿಗೂ ಗೊತ್ತು ಎಂದು ಸುಧಾಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.
ಪಿಯುಸಿ ಮಾಡಿ ಎಂಎ ಡಿಗ್ರಿ ಸರ್ಟೀಫೀಕೇಟ್ ಬೇಕಂದ್ರೆ ಸಿಗುತ್ತಾ? ಅದಕ್ಕಾಗಿ ಓದಬೇಕಾಗುತ್ತೆ, ಅಡ್ಡದಾರಿ ರಾಜಕಾರಣ ಬಹಳ ದಿನ ಉಳಿಯಲ್ಲ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಅವರು ಎಲ್ಲಿದ್ರು? ಎಲ್ಲಿಂದ ಬಂದವರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಅಂತ ಹೇಳಿದ್ರು.
ರಾಜಕಾರಣದಲ್ಲಿ ಆಸೆ ಇರಬೇಕು ದುರಾಸೆ ಇರಬಾರದು. ಎಲ್ಲಾ ಅಧಿಕಾರ ಬೇಗ ಸಿಗಬೇಕು ಅನ್ನೋ ಆತುರ ಇರಬಾರದು. ತಾಳ್ಮೆ ಇರಬೇಕು. ಹಣಬಲದಿಂದ ರಾಜಕಾರಣ ಮಾಡಿದ್ರೇ ಏನೇನು ಗತಿ ಆಗಿದೆ ಎನ್ನುವ ಇತಿಹಾಸ ಎಲ್ಲಾ ಪಕ್ಷದಲ್ಲೂ ಆಯಾ ಕಾಲಕಾಲಕ್ಕೆ ತಕ್ಕಂತೆ ರಾಜ್ಯದಲ್ಲಿದೆ. ಡೋಂಗಿ ರಾಜಕಾರಣ ಬಹಳ ದಿನ ಉಳಿಯಲು ಸಾಧ್ಯವಿಲ್ಲ. ನಾನು 5 ಬಾರಿ ಶಾಸಕನಾಗಿದ್ದೇನೆ ಅರ್ಹತೆಯಿದೆ. ಹಾಗಾಗಿ ನನಗೆ ಸಚಿವ ಸ್ಥಾನ ನೀಡಿದ್ದಾರೆ. ಇವರಿಂದ ನಾನು ಪಾಠ ಕಲಿಯಬೇಕಿಲ್ಲ ಅಂತ ಸುಧಾಕರ್ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು.
ಅಂದ ಹಾಗೆ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದ ಶಾಸಕ ಸುಧಾಕರ್ ಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅತೃಪ್ತಗೊಂಡು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದರು.