– ಕಾಂಗ್ರೆಸ್ ಜೊತೆಗೆ ಸಂಬಂಧ ಹಾಳಾಗಿದ್ದಾಗ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ
– ದೋಸ್ತಿ ಶಾಸಕರ ವಿರುದ್ಧ ಹರಿಹಾಯ್ದ ಸಚಿವ
ಮೈಸೂರು: ಜಿಲ್ಲಾ ಪಂಚಾಯತ್ ಮೈತ್ರಿ ವಿಚಾರದಲ್ಲಿ ಬಿಜೆಪಿಯವರಿಗೆ ಮಾತು ಕೊಟ್ಟಿದ್ದೇವೆ. ಹೀಗಾಗಿ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಜೊತೆ ಮಾತನಾಡಿದ್ದೇನೆ. ಸ್ಥಳೀಯ ಮಟ್ಟದ ಪರಿಸ್ಥಿತಿಗೆ ಅನುಗುಣವಾಗಿ ಹೊಂದಾಣಿಕೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಾವು ನಿರ್ಧಾರ ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಜಿಲ್ಲಾ ಪಂಚಾಯತ್ ಸದಸ್ಯರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾವು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಈ ಹಿಂದೆ ಕಾಂಗ್ರೆಸ್ ಜೊತೆಗಿನ ಸಂಬಂಧ ಹಾಳಾಗಿದ್ದಾಗ ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯ ನಿರ್ಧಾರ ಮಾಡಿಕೊಂಡಿದ್ದೇವು. ಮುಂದಿನ ಅವಧಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾರು ಎನ್ನುವುದು ನಿರ್ಣಯವಾಗಿದೆ ಎಂದು ತಿಳಿಸಿದರು.
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಶಾಸಕ ನಾರಾಯಣ ರಾವ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸಾರಾ ಮಹೇಶ್ ಅವರು, ಸಿದ್ದರಾಮಯ್ಯ ಅವರನ್ನು ಓಲೈಸಲು ಹೇಳಿಕೆ ಕೊಟ್ಟಿದ್ದಾರೆ. ಇಲ್ಲವೇ ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಲಿ ಎಂದು ಹೊಗಳಿದ್ದಾರೆ ಎಂದು ತಿರುಗೇಟು ಕೊಟ್ಟರು.
Advertisement
ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನಾವು ಶಾಸಕ ನಾರಾಯಣ ರಾವ್ ರೀತಿ ಮಾತನಾಡಬಹುದು. ಆದರೆ ನಮ್ಮ ರಾಜ್ಯದ, ರಾಷ್ಟ್ರದ ನಾಯಕರು ದೋಸ್ತಿ ಪಕ್ಷದ ವಿರುದ್ಧ ಮಾತನಾಡದಂತೆ ಸೂಚನೆ ಕೊಟ್ಟಿದ್ದಾರೆ. ಯಾವುದೇ ವಿಚಾರವಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ. ಬಹಿರಂಗವಾಗಿ ಯಾವುದೇ ಕಾರಣಕ್ಕೂ ಚರ್ಚೆ ಬೇಡವೆಂದು ತಿಳಿಸಿದ್ದಾರೆ. ನಾವು ಸಹ ಕಾದು ನೋಡುತ್ತೇವೆ. ಕಾಂಗ್ರೆಸ್ ನಾಯಕರು ತಮ್ಮ ಶಾಸಕರಿಗೆ ಈಗಲಾದರೂ ಎಚ್ಚರಿಕೆ ಕೊಡಲಿ ಎಂದು ಗುಡುಗಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv