ಹಾಸನ: ಇಂದು ಜಿಲ್ಲೆಯಲ್ಲಿ ಹಾಲು ಒಕ್ಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಡೀ ಕಾರ್ಯಕ್ರಮದ ಸ್ವಾಗತ, ನಿರೂಪಣೆ, ಸನ್ಮಾನ ಎಲ್ಲವನ್ನೂ ಲೋಕೋಪಯೋಗಿ ಸಚಿವ ರೇವಣ್ಣ ಅವರೇ ನಿರ್ವಹಿಸಿದ್ದು, ಏಯ್ ಫೋಟೋ ತೆಗೆಯೋ ಎಂದು ಹೇಳುತ್ತಾ ಖುಷಿ ಖುಷಿಯಲ್ಲಿ ಇಡೀ ಕಾರ್ಯಕ್ರಮವನ್ನು ತಾವೇ ಆವರಿಸಿಕೊಂಡಿದ್ದರು.
ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿದ್ದರಿಂದ ಇವರೇ ಇಡೀ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ವೇಳೆ ಸ್ವಾಗತಕ್ಕೆ ಶಾಸಕ ಬಾಲಕೃಷ್ಣ ಸಜ್ಜಾಗಿದ್ದರೂ ಅವರಿಗೆ ಮೈಕ್ ನೀಡದೆ ತಾವೇ ಸ್ವಾಗತ ಭಾಷಣ ಮಾಡಿದರು. ಸಿಎಂ ಪ್ರಮುಖ ಕಾರ್ಯಕ್ರಮಕ್ಕೆ ತಡವಾಗುತ್ತೆಂದು ಆತುರಾತುರವಾಗಿ ಕಾರ್ಯಕ್ರಮ ಮುಗಿಸಿದರು. ಅಷ್ಟೇ ಅಲ್ಲದೇ ಸ್ವಾಗತ, ಒಟ್ಟೊಟ್ಟಿಗೇ ಸನ್ಮಾನ, ಅವರ ಮಾತಿನ ಶೈಲಿಯ ವರ್ತನೆ ಕಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರೆಲ್ಲರೂ ನಕ್ಕು ನಲಿದರು.
10 ವರ್ಷಗಳ ಬಳಿಕ ಒಲಿದು ಬಂದ ಮಂತ್ರಿಗಿರಿಯಿಂದ ಜಿಲ್ಲೆಯಲ್ಲಿ ಆರಂಭವಾಗಿರೊ ಅಭಿವೃದ್ಧಿ ಪರ್ವದಿಂದ ಖುಷಿಯಲ್ಲಿದ್ದ ರೇವಣ್ಣನವರು ಸಿಎಂ ಭಾಷಣ ಮಾಡುತ್ತಿದ್ದರೂ ವೇದಿಕೆಯಲ್ಲಿ ತಮ್ಮಪಾಡಿಗೆ ತಾವು ಓಡಾಡುತ್ತಿದ್ದರು. ಸಿಎಂ ಮಾತು ಮುಗಿದ ಕೂಡಲೆ ಅವರಿಂದ ಮೈಕ್ ಕಸಿದುಕೊಂಡು ಮತ್ತೆ ಮಾತು ಆರಂಭ ಮಾಡಿದರು. ಸನ್ಮಾನ ವೇಳೆ ಹಾಸನ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಗೆ ಸನ್ಮಾನ ನಾನೇ ಮಾಡುತ್ತೇನೆ ಎಂದು ಹೇಳಿ ಓಡಿ ಬಂದು ರಾಕೇಶ್ ಸಿಂಗ್ ಗೆ ಹೊದಿಸಿದ್ದ ಶಾಲು ತೆಗೆದು ತಾವೇ ಹೊದಿಸಿದರು. ಬಳಿಕ ನೆರೆ ಸಂತ್ರಸ್ಥರಿಗೆ ಸಹಕಾರಿ ಸಂಘಗಳ ಚೆಕ್ ವಿತರಣೆಯನ್ನೂ ಕೂಡ ತಾವೇ ನೆರವೆರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv