– ಪರಿಶಿಷ್ಟ ಜಾತಿ ನಾಯಕರು ಡಿಸಿಎಂ ಆಗಿರುವುದನ್ನ ಪಕ್ಷದವರೇ ಸಹಿಸಲ್ಲ
– ಸಂಚು ಮಾಡಲು ಹೋದ್ರೆ ಕಾಂಗ್ರೆಸ್ ನಾಯಕರು ಏಟು ತಿಂತಾರೆ
ಬೆಂಗಳೂರು: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ದಲಿತ ನಾಯಕರು. ಅವರಿಂದ ಗೃಹ ಖಾತೆ ವಾಪಸ್ ಪಡೆಯಬಾರದಿತ್ತು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಡಿಸಿಎಂ ಪರ ಬ್ಯಾಟ್ ಬೀಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಗೃಹ ಇಲಾಖೆಯಲ್ಲಿ ವರ್ಗಾವಣೆ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಹೀಗೆ ಆರೋಪ ಮಾಡಿಯೇ ಕಾಂಗ್ರೆಸ್ ನಾಯಕರು ಇಂತಹ ಸ್ಥಿತಿಗೆ ಬಂದಿದ್ದಾರೆ. ನಾನು ಯಾವ ಇಲಾಖೆಯ ವರ್ಗಾವಣೆಯಲ್ಲಿಯೂ ಕೈ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದರು.
Advertisement
Advertisement
ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ:
ಪರಮೇಶ್ವರ್ ಅವರ ಮೇಲೆ ಕಾಂಗ್ರೆಸ್ ಶಾಸಕರೇ ಒತ್ತಡ ಹಾಕಿರಬಹುದು. ಆದರೆ ಗೃಹ ಖಾತೆ ಡಿಸಿಎಂ ಬಳಿ ಇರಬೇಕಿತ್ತು. ಪರಮೇಶ್ವರ್ ಅವರು ಆರು ತಿಂಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಗೃಹ ಖಾತೆ ತಪ್ಪಲು ನಾನೇ ಕಾರಣ ಅಂತ ಕಾಂಗ್ರೆಸ್ ಶಾಸಕರು ನನ್ನ ವಿರುದ್ಧ ಆರೋಪ ಮಾಡಿದ್ರೆ ಮಾಡಿಕೊಳ್ಳಲಿ. ಒಂದು ವೇಳೆ ನನ್ನ ಹಸ್ತಕ್ಷೇಪವಿದ್ದರೆ ಬಹಿರಂಗಪಡಿಸಲಿ ಎಂದು ಗುಡುಗಿದರು.
Advertisement
ಕಾಂಗ್ರೆಸ್‍ನಲ್ಲಿ ಪರಿಶಿಷ್ಟ ಜಾತಿ ನಾಯಕರು ಡಿಸಿಎಂ ಆಗಿರುವುದನ್ನು ಪಕ್ಷದ ಸದಸ್ಯರೇ ಸಹಿಸಿಲ್ಲ. ಇದಕ್ಕೆ ನಾನೇನು ಮಾಡಲಿ. ಕಾಂಗ್ರೆಸ್ ನಾಯಕರು ಹೀಗೆ ಸಂಚು ಮಾಡಲು ಹೋದರೆ ಏಟು ತಿನ್ನುವ ಕಾಲ ಬರುತ್ತದೆ ಎಂದು ಆಕ್ರೋಶ ಹೊರಹಾಕಿದರು.
Advertisement
ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಅದನ್ನು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಕುಳಿತು ತೀರ್ಮಾನ ಮಾಡುತ್ತಾರೆ. ನಾನೇನು ಮಾತನಾಡುವುದಿಲ್ಲ ಎಂದು ರೇವಣ್ಣ ಹೇಳಿದರು.
ದೆಹಲಿಯಲ್ಲಿ ನಿನ್ನೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನು ಭೇಟಿ ಮಾಡಿದ್ದೇನೆ. ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ವಿಷಯವನ್ನು ಪ್ರಸ್ತಾಪಿಸಿದ್ದು, ಶೇ. 85 ಭೂಮಿ ವಶ, ಇನ್ನಿತರ ಕೆಲಸ ಆಗಿದೆ. ಕೂಡಲೇ ಕೆಲಸ ಪ್ರಾರಂಭ ಮಾಡುವಂತೆ ಮನವಿ ಸಲ್ಲಿಸಿರುವೆ ಎಂದ ಅವರು, ಅರಣ್ಯ ಇಲಾಖೆ ಸಭೆ ಮುಂದಿನ ತಿಂಗಳು 10ರಂದು ದೆಹಲಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ-ನವಲುಗುಂದ-ನರಗುಂದ ನೈಸ್ ರೋಡ್ 6 ಲೈನ್ ಮಾಡಲು ಯೋಜನೆ ಇದೆ. ಎರಡು ಲೈನ್ ರೋಡ್ ಈಗಾಗಲೇ ಪ್ರಾರಂಭವಾಗಿದೆ. ಹುಬ್ಬಳ್ಳಿ ನಗರ ರಸ್ತೆ ನಿರ್ಮಾಣದ ಯೋಜನೆಯ ಕುರಿತು ಚರ್ಚೆ ಮಾಡಿದ್ದೇವೆ. ಹಾಸನ- ಮಂಗಳೂರು ರಸ್ತೆ ಕಾಮಗಾರಿ, ಮೈಸೂರು-ಮಡಿಕೇರಿ-ಮಾಣಿ ರಸ್ತೆ ಕೆಲಸ ಬೇಗ ಪ್ರಾರಂಭ ಮಾಡಲು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಚಾರ್ಮಡಿ ಘಾಟ್ ರಸ್ತೆ ಆಗಲೀಕರಣಕ್ಕೆ 250 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿ, ಆದಷ್ಟು ಬೇಗ ಹಣ ಬಿಡುಗಡೆಗೆ, ಹಾಸನ-ಬೇಲೂರು ರಸ್ತೆ ನಿರ್ಮಾಣ ಹಾಗೂ ಚನ್ನರಾಯಪಟ್ಟಣ-ಮಡಿಕೇರಿ ರಸ್ತೆ ಕಾಮಗಾರಿ ಮನವಿ ಸಲ್ಲಿಸಿದ್ದೇನೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ವೆ ಆಗುತ್ತಿದೆ. ಈ ಕಾಮಗಾರಿಯ ಮೊತ್ತವು 600 ಕೋಟಿ ರೂ. ಪ್ರಾಜೆಕ್ಟ್ ಆಗಬಹುದು ಎಂದು ಮಾಹಿತಿ ನೀಡಿದರು.
ಹಾಸನ-ಕೊಡಗು-ಚಿಕ್ಕಮಗಳೂರು ಕಾಫಿ ಬೆಳೆಗಾರರಿಗೆ ಶೇ. 50 ಪರಿಹಾರ ಕೊಡುವಂತೆ ಮನವಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ರೇಲ್ವೇ ಇಲಾಖೆ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾಲದ ಯೋಜನೆಯಾಗಿರುವ ಅಂಕೋಲ ರೈಲ್ವೇ ಮಾರ್ಗ ಪ್ರಾರಂಭ ಹಾಗೂ ಚಿಕ್ಕಮಗಳೂರು-ಶಿವಮೊಗ್ಗ-ಶೃಂಗೇರಿ ರೇಲ್ವೇ ಮಾರ್ಗಕ್ಕೆ ಮನವಿ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೆ ಬೆಂಗಳೂರು ಸಬರ್ಬನ್ ರೈಲ್ ಕುರಿತು ಚರ್ಚೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನೈಸ್ ವರದಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಸದನ ಸಮಿತಿ ವರದಿ ಸರ್ಕಾರದ ಹಂತದಲ್ಲಿ ಇದೆ. ಈ ಬಗ್ಗೆ ಚರ್ಚೆ ನಡೆಸಿ ಒಪ್ಪಿಗೆ ಸೂಚಿಸಲಾಗಿದೆ. ಈಗ ಯಾವ ಹಂತದಲ್ಲಿದೆ ಅಂತ ತಿಳಿದುಕೊಳ್ಳಬೇಕಿದ್ದು, ಕುಮಾರಸ್ವಾಮಿ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv