ಬೆಂಗಳೂರು: ಬಾಯಿ ಬಿಟ್ಟರೆ ಬಾಂಬ್ ಎನ್ನುವ ಲೆವೆಲ್‍ಗೆ ಮಾತಿನ ಪಟಾಕಿಯಿಂದಲೇ ಮೈತ್ರಿ ಸರ್ಕಾರದ ಬುಡಕ್ಕೆ ಬೆಂಕಿಯಿಟ್ಟ ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದಾಗಲೂ ಡೋಂಟ್ ಕೇರ್ ಮಾಸ್ಟರ್ ಆಗಿದ್ದರು. ಆಗಾಗ ಮಾತಿನ ಬಾಂಬ್ ಹಾಕಿ ಬಿಎಸ್‍ವೈಗೂ ನುಂಗಲಾರದ ಬಿಸಿ ತುಪ್ಪದಂತಾಗಿದ್ದರು. ದೊಡ್ಡ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಾಹುಕಾರ್ ಡಿಸಿಎಂ ಆಗುವುದಕ್ಕೆ ಒಂದು ಹಂತದಲ್ಲಿ ಎಲ್ಲಾ ಸರ್ಕಸ್ ಮಾಡಿದ್ದರು. ಆದರೆ ಹೈಕಮಾಂಡ್ ಇವರ ಮಾತಿನ ಆಟಕ್ಕೆ ಅಂಕುಶ ಹಾಕಿದೆ. 60 ದಿನ ಹೊಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡೆ ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದ ರಮೇಶ್ ಜಾರಕಿಹೊಳಿ ಇಂದು ಫುಲ್ ಸೈಲೆಂಟ್ ಮೋಡ್‍ಗೆ ಜಾರಿಬಿಟ್ಟಿದ್ದಾರೆ.
ಇಂದು ಪ್ರಮಾಣವಚನ ಸ್ವೀಕರಿಸಿದ ಮೇಲೆ ಎಲ್ಲಾ ಸಚಿವರು ಮಾಧ್ಯಮದವರಿಗೆ ಫುಲ್ ಖುಷ್ ಖುಷಿಯಿಂದ ಕರೆದು ಕರೆದು ಮಾತಾನಾಡಿಸಿದ್ರೆ, ರಮೇಶ್ ಜಾರಕಿಹೊಳಿ ಮುನಿಸಿಕೊಂಡ ಮಗುವಿನಂತೆ ಮುಖ ದಪ್ಪ ಮಾಡಿಕೊಂಡು ಕುಳಿತುಕೊಂಡಿದ್ದರು.
Advertisement
Advertisement
ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದಲು ರಮೇಶ್ ಜಾರಕಿಹೊಳಿ ಮನೆಯಲ್ಲಿ ಮಾತಾನಾಡದೆ ರಾಜಭವನದಲ್ಲಿ ಮಾತಾನಾಡುತ್ತೇನೆ ಎಂದು ಹೇಳಿದ್ದರು. ಆದರೆ ರಾಜಭವನದಲ್ಲೂ ಮಾತಾನಾಡದ ರಮೇಶ್ ಮಾಧ್ಯಮ ಕಂಡೊಡನೇ ತಲೆ ತಗ್ಗಿಸಿ ಹೊರಟು ಹೋದರು. ಪ್ರಮಾಣ ವಚನ ನಡೆದ ಮೇಲೂ ರಮೇಶ್ ಕಾರನ್ನೇರಿದರು. ಬಳಿಕ ಮಾಧ್ಯಮವನ್ನು ಕಂಡ ತಕ್ಷಣ ರಮೇಶ್ ಜಾರಕಿಹೊಳಿ ಕಾರಿನ ಗ್ಲಾಸ್ ಏರಿಸಿ ನಾನು ಮಾತನಾಡುವುದಿಲ್ಲ ಎಂದು ಹೊರಟು ಹೋದರು.
Advertisement
ನಾನು ಮಾತನಾಡಲ್ಲ:
ಸಚಿವರಾದ 10 ಮಂದಿಯಲ್ಲಿ 9 ಮಂದಿ ತಮ್ಮ ಸಂತೋಷದ ಕ್ಷಣಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು. ಆದರೆ ಇದಕ್ಕೆ ಬೆಳಗಾವಿಯ ಸಾಹುಕಾರ್ ರಮೇಶ್ ಜಾರಕಿಹೊಳಿ ಮಾತ್ರ ತದ್ವಿರುದ್ಧವಾಗಿದ್ದರು. ಸಮ್ಮಿಶ್ರ ಸರ್ಕಾರ ಬೀಳುವಾಗಿನಿಂದ ಮಾಧ್ಯಮಗಳ ಜೊತೆ ಅಂತರ ಕಾಯ್ದುಕೊಂಡಿದ್ದ ರಮೇಶ್ ಜಾರಕಿಹೊಳಿ, ಇಂದು ಮಿನಿಸ್ಟರ್ ಆದರೂ ಕೂಡ ತುಟಿ ಬಿಚ್ಚಲಿಲ್ಲ. ಸಾಹುಕಾರ್ ಉಳಿದುಕೊಳ್ಳುತ್ತಿದ್ದ ರೇಸ್ ವ್ಯೂ ಕಾಟೇಜ್‍ನಲ್ಲಿ ಬೆಳ್ಳಂಬೆಳಗ್ಗೆ ಮಾಧ್ಯಮಗಳು ಅವರನ್ನು ಹುಡುಕುವ ಕೆಲಸ ಮಾಡಿತ್ತು.
Advertisement
ಮಂತ್ರಿ ಸ್ಕ್ವೇರ್ ನಲ್ಲಿದ್ದಾರೆ ಎಂದು ಗೊತ್ತಾಗಿ ಅಲ್ಲಿಯೂ ಠಿಕಾಣಿ ಹೂಡಲಾಯಿತು. ಕೊನೆಗೆ ಸದಾಶಿವನಗರ ಕ್ಲಬ್ ಬಳಿ ಇರುವ ಗಣೇಶ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ದೇವರ ಮೂಡ್ ನಲ್ಲಿದ್ದೇನೆ ರಾಜಭವನದಲ್ಲಿ ಮಾತಾನಾಡುತ್ತೇನೆ ಡಿಸ್ಟರ್ಬ್ ಮಾಡಬೇಡಿ ಎಂದಿದ್ದರು. ಅದಾದ ಮೇಲೆ ರಾಜಭವನದಲ್ಲೂ ಸಹ ಮಾಧ್ಯಮಗಳ ಜೊತೆ ಮಾತಾಡಲಿಲ್ಲ. ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೂ ಸಹ ಮಾತಾಡಲಿಲ್ಲ.
ಧಾನಸೌಧಕ್ಕೆ ಬಂದು ಸಚಿವ ಸಂಪುಟದಲ್ಲಿ ಪಾಲ್ಗೊಂಡ ಬಳಿಕವೂ, ನಾನು ಮಾತಾಡಲ್ಲ ಎಂದು ಸಾಹುಕಾರ್ ಹೊರಟು ಹೋದರು. ಉಪಮುಖ್ಯಮಂತ್ರಿ ಕೊಡಲ್ವಂತೆ ನಿಮಗೆ? ನಿಮ್ಮನ್ನು ನಂಬಿ ಬಂದ ಮಹೇಶ್ ಕುಮಟಳ್ಳಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಲು ವಿಫಲರಾದ್ರಲ್ಲಾ ಎನ್ನುವ ಮಾಧ್ಯಮಗಳ ಖಾರವಾದ ಪ್ರಶ್ನೆಗೆ ತಪ್ಪಿಸಿಕೊಳ್ಳಲೊ ಏನೊ ಸಾಹುಕಾರ್ ಇಡೀ ದಿನ ಅಂತರ ಕಾಯ್ದುಕೊಂಡೇ ನಿರ್ಗಮಿಸಿದರು.