ಅಭಿಮಾನಿಗಳ ಪಾಲಿನ ದೇವರೇ ಆಗಿರುವ ಪುನೀತ್ ರಾಜ್ ಕುಮಾರ್ (Puneeth Raj Kumar) ಜೀವನವನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ಕುರಿತು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದಾರೆ. ಈ ಕುರಿತು ಸಚಿವ ಆರ್.ಅಶೋಕ್ (R. Ashok) ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ಶಿಕ್ಷಣ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಪುನೀತ್ ಬದುಕು ಮಾದರಿ. ಅವರ ಚಿತ್ರಗಳು ಕೂಡ ಸಮಾಜಕ್ಕೆ ಅದ್ಭುತ ಸಂದೇಶವನ್ನು ನೀಡಿವೆ. ಹಾಗಾಗಿ ಮಕ್ಕಳಿಗೆ ಅವರ ಬದುಕನ್ನು ಓದಿಸಬೇಕು. ಈ ಕುರಿತು ಕೂಡಲೇ ಸರಕಾರ ಗಮನ ಹರಿಸಬೇಕು ಎಂದು ಸಾಕಷ್ಟು ಅಭಿಮಾನಿಗಳು ಸರಕಾರದ ಗಮನ ಸೆಳೆದಿದ್ದರು. ಈ ಕುರಿತು ಮಾತನಾಡಿರುವ ಅಶೋಕ್, ‘ಪುನೀತ್ ಅವರ ಬದುಕು ಎಲ್ಲರಿಗೂ ಆದರ್ಶ. ಪಠ್ಯ ಪುಸ್ತಕದಲ್ಲಿ (Text Book) ಸೇರಿಸಿದರೆ, ಯಾರೂ ಪ್ರಶ್ನೆ ಮಾಡಲಾರವು. ಮುಂದಿನ ವರ್ಷ ಸೇರಿಸುವ ಕುರಿತು ಶಿಕ್ಷಣ ಸಚಿವರ ಜೊತೆ ಮಾತನಾಡುವೆ’ ಎಂದಿದ್ದಾರೆ. ಇದನ್ನೂ ಓದಿ:`ಹೃದಯದ ರಾಣಿ’ ಎಂದು ಪ್ರೇಯಸಿಯನ್ನ ಹಾಡಿ ಹೊಗಳಿದ ಸಿದ್ಧಾರ್ಥ್
ಪುನೀತ್ ರಾಜ್ ಕುಮಾರ್ ಅವರ ಮೊದಲ ಪುಣ್ಯಸ್ಮರಣೆ ಸಂದರ್ಭದಲ್ಲೇ ಸರಕಾರ ಕೂಡ ಅವರಿಗೆ ನವೆಂಬರ್ 1 ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ದಕ್ಷಿಣ ಇಬ್ಬರು ಸ್ಟಾರ್ ನಟರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇದರಲ್ಲಿ ಒಬ್ಬ ನಟರು ಈಗಾಗಲೇ ಒಪ್ಪಿಕೊಂಡಿದ್ದು, ಮತ್ತೋರ್ವ ನಟರು ಇನ್ನೂ ಉತ್ತರಿಸಬೇಕಿದೆ ಎಂದಿದ್ದಾರೆ. ಇಬ್ಬರಿಗೂ ಕರ್ನಾಟಕದ ನಂಟಿರುವುದು ಮತ್ತೊಂದು ವಿಶೇಷ.
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಕರ್ನಾಟಕ ಸರಕಾರವು ಆಹ್ವಾನ ನೀಡಿದ್ದು, ಜ್ಯೂನಿಯರ್ ಎನ್.ಟಿ.ಆರ್ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು, ರಜನಿಕಾಂತ್ ಅವರ ಒಪ್ಪಿಗೆ ಪತ್ರ ಇನ್ನಷ್ಟೇ ಸಿಗಬೇಕಿದೆ. ಈ ಕಾರ್ಯಕ್ರವನ್ನು ನವೆಂಬರ್ 1 ರಂದು ವಿಧಾನಸೌಧದ ಮುಂಭಾಗದಲ್ಲಿ ಆಯೋಜನೆ ಮಾಡಿದ್ದು, ಡಾ.ರಾಜ್ ಕುಟುಂಬ ಹಾಗೂ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.