ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಮಧ್ಯೆ ಮದ್ಯದಂಗಡಿ ತೆರೆಯುವಂತೆ ಜನಸಾಮಾನ್ಯರು ಒತ್ತಾಯಿಸುತ್ತಿದ್ದಾರೆ. ಆದರೆ ಇತ್ತ ಎಣ್ಣೆ ಸಹವಾಸ ಬೇಡವೇ ಬೇಡ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಮದ್ಯದ ಅಂಗಡಿ ತೆರೆಯಲು ಅನುಮತಿ ಸಿಗುತ್ತಾ ಎಂಬ ಪ್ರಶ್ನೆಗೆ, ಎಣ್ಣೆ ನಮ್ಮದಲ್ಲ, ಊಟ ಮಾತ್ರ ನಮ್ಮದು. ಎಣ್ಣೆ ನಿಮ್ಮದು, ಊಟ ನಮ್ಮದು. ಸದ್ಯಕ್ಕೆ ಎಣ್ಣೆ ಬೇಡವೇ ಬೇಡ. ಎಣ್ಣೆ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಷ್ಟೇ ಆಗೋದು. ಈಗ ಏನದರೂ ನಾವು ಎಣ್ಣೆ ಬಿಟ್ಟರೆ ಕೊಟ್ಟಿರೋ ರೇಷನ್ ಎಲ್ಲಾ ಹೋಗಿಬಿಡುತ್ತೆ. ಈ ಹಿನ್ನೆಲೆಯಲ್ಲಿ ಸದ್ಯ ಎಣ್ಣೆ ವಿಚಾರ ಬೇಡವೇ ಬೇಡ ಎಂದು ಉತ್ತರಿಸಿದರು.
ಬೆಂಗಳೂರಿನಲ್ಲಿ ಮಳೆ ಬಂದು ಕಳೆದ ಎರಡು ದಿನಗಳಿಂದ ಅನಾಹುತಗಳಾಗಿವೆ. ಬೇಗ ಮಳೆ ಪ್ರಾರಂಭ ಆಗಿದೆ. ಸಾಮಾನ್ಯ ಮಳೆಗಿಂತ ಈ ಬಾರಿ ಅಧಿಕ ಮಳೆಯಾಗುತ್ತೆ ಎಂದು ಹಲವಾರು ಸಮೀಕ್ಷೆಗಳು ನಡೆದಿವೆ ಎಂದರು.
ಮಳೆ ಬಂದು ರಸ್ತೆ ಹಾಳಾಗಿದೆ, ಗೋಡೆ ಕುಸಿದಿರುವ ವಿಚಾರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲವನ್ನು ಹೇಗೆ ತಡೆಯುವುದು ಎಂಬ ಬಗ್ಗೆ ಇಂದು ಸಂಜೆ ಬಿಬಿಎಂಪಿ ಸಭೆ ಕರೆದಿದ್ದೇವೆ. ನಮಗೆ ಕೊರೊನಾ ನಿಯಂತ್ರಣ ಒಂದು ಕಡೆ ಸವಾಲಾದರೆ ಮತ್ತೊಂದು ಕಡೆ ಮಳೆಯದ್ದು ಮತ್ತೊಂದು ಸವಾಲಾಗಿದೆ ಎಂದರು.