– ಕಾರಿನ ಹೆಸರನ್ನೇ ಬದಲಿಸಿದ ಪೊಲೀಸ್
ಬಳ್ಳಾರಿ: ಕಂದಾಯ ಸಚಿವ ಆರ್.ಅಶೋಕ್ ಪುತ್ರನ ಕಾರು ಅಪಘಾತ ಪ್ರಕರಣ ಮುಚ್ಚಿಹಾಕಲು ಯತ್ನಿಸಿ ಪೊಲೀಸರು ಎಡವಟ್ಟು ಮಾಡಿಕೊಂಡ್ರಾ ಎನ್ನುವ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಮರಿಯಮ್ಮನಹಳ್ಳಿಯಲ್ಲಿ ಫೆಬ್ರವರಿ 10ರಂದು ಸೋಮವಾರ ಮಧ್ಯಾಹ್ನ 2.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕೆಎ05, ಎಂಡಬ್ಲ್ಯೂ 457ರ ಸಂಖ್ಯೆಯ ಕಾರು ಗುದ್ದಿದೆ. ಆದರೆ ಬೆಂಜ್ ಕಾರು ಎನ್ನುವ ಬದಲು ಪೊಲೀಸರು ಆಡಿ ಕಾರು ಎಂದು ಎಫ್‌ಐಆರ್‌ನಲ್ಲಿ ಬಳಸಿದ್ದು ಸಂಶಯಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಮೃತ ರವಿ ನಾಯಕ್ ವಯಸ್ಸು 16 ಎಂದು ಹೇಳಲಾಗುತ್ತಿದೆ. ಆದರೆ ಎಫ್‍ಐಆರ್ ನಲ್ಲಿ 19 ವಯಸ್ಸು ಎಂದು ನಮೂದಿಸಲಾಗಿದೆ. ಹೀಗಾಗಿ ಪೊಲೀಸರ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಬಳ್ಳಾರಿ ಅಪಘಾತ ಕೇಸ್‍ಗೆ ಹೊಸ ಟ್ವಿಸ್ಟ್ – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವೈದ್ಯ
ಅಸಲಿಗೆ ಆಕ್ಸಿಡೆಂಟ್ ಆದಾಗ ಕಾರು ಯಾರು ಓಡಿಸುತ್ತಿದ್ದರು ಅಂತಾ ಗೊತ್ತಾಗಿಲ್ಲ. ಇಬ್ಬರ ಜೀವ ಬಲಿ ಪಡೆದ ಎ1 ಆರೋಪಿ ರಾಹುಲ್ ಎಲ್ಲಿದ್ದಾನೆ ಎನ್ನುವುದು ಗೊತ್ತಿಲ್ಲ. ಯಾವ ಆಸ್ಪತ್ರೆಯಲ್ಲಿ ರಾಹುಲ್ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನುವುದು ತಿಳಿದಿಲ್ಲ. ಆತನನ್ನು ಪತ್ತೆ ಮಾಡಬೇಕಾದ ಪೊಲೀಸರೇ ಸುಮ್ಮನಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಅಪಘಾತವಾದ ಕಾರಿಗೆ ನಮ್ಗೂ ಸಂಬಂಧವಿಲ್ಲ: ಅಡ್ಡಗೋಡೆಯ ಮೇಲೆ ದೀಪವಿಟ್ಟ ಅಶೋಕ್
ಸ್ವತಃ ಬಳ್ಳಾರಿ ಎಸ್‍ಪಿ ಸಿ.ಕೆ.ಬಾಬಾ ಅವರಿಗೆ ಎ1 ಆರೋಪಿಯ ಸುಳಿವಿನ ಬಗ್ಗೆ ಮಾಹಿತಿಯಿಲ್ಲ. ಅಪಘಾತಕ್ಕೆ ಒಳಗಾದವರು ಯಾವುದಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೇ ಬೇಕಲ್ವಾ? ಕಾರಿನಲ್ಲಿದ್ದ ಆರೋಪಿಗಳು ಸರಿಯಾದ ವಿಳಾಸ ಸಹ ಕೊಟ್ಟಿಲ್ಲ. ಮನೆ ನಂಬರ್, ರಸ್ತೆ, ಕ್ರಾಸ್, ಲ್ಯಾಂಡ್ ಮಾರ್ಕ್ ನೀಡದೆ ಮುಚ್ಚಿಡುವ ಯತ್ನ ನಡೆದಿದೆ. ಅಸಲಿ ಸತ್ಯವನ್ನು ಮುಚ್ಚಿಟ್ಟು, ಎಲ್ಲವನ್ನೂ ಮರೆಮಾಚಲಾಗುತ್ತಿದೆ ಎನ್ನುವ ಸಂಶಯ ಶುರುವಾಗಿದೆ. ಇದನ್ನೂ ಓದಿ: ಅಪಘಾತದ ಸುತ್ತ ಅನುಮಾನ: ಅಶೋಕ್ ಮಗ ಕೃತ್ಯ ಎಸಗಿ ಪರಾರಿ?ಪೊಲೀಸರಿಂದಲೇ ಬಚಾವ್?
ಏನಿದು ಪ್ರಕರಣ?:
ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ ಫೆಬ್ರವರಿ 10ರಂದು ಸೋಮವಾರ ಮರ್ಸಿಡೆಜ್ ಬೆಂಜ್ ಕಾರು ಡಿಕ್ಕಿ ಹೊಡೆದು ಟೀ ಕುಡಿಯಲು ಬಂದಿದ್ದ ಸ್ಥಳೀಯ ಯುವಕ ರವಿ ನಾಯ್ಕ್ ಮೃತಪಟ್ಟಿದ್ದ. ಅಷ್ಟೇ ಅಲ್ಲದೆ ಕಾರಿನಲ್ಲಿದ್ದ ಸಚಿನ್ ಎನ್ನುವ ಯುವಕ ಕೂಡ ಸಾವನ್ನಪ್ಪಿದ್ದ. ಈ ಕಾರನ್ನು ಓಡಿಸುತ್ತಿದ್ದಿದ್ದು ಎಫ್‍ಐಆರ್ ಮಾಹಿತಿಯ ಪ್ರಕಾರ ರಾಹುಲ್. ಇದೇ ಕಾರಿನಲ್ಲಿ ಶಿವಕುಮಾರ್, ರಾಕೇಶ್ ಮತ್ತು ವರುಣ್ ಎನ್ನುವ ಉಳಿದ ಮೂವರು ಇದ್ದರು.