– ಮಗ ಎಲ್ಲಿದ್ದಾನೆ ಪ್ರಶ್ನೆಗೆ ಉತ್ತರವಿಲ್ಲ
– ಜಾಣ ಉತ್ತರ ನೀಡಿ ಜಾರಿಕೊಂಡ ಸಚಿವರು
– ಎಫ್‍ಐಆರ್ ನಲ್ಲಿ ಮಗನ ಹೆಸರಿಲ್ಲ
ಬೆಂಗಳೂರು: ಬಳ್ಳಾರಿಯ ಭಾಗದಲ್ಲಿ ಅಪಘಾತವಾದ ಕಾರು ಮತ್ತು ಅದು ನೋಂದಣಿ ಹೊಂದಿರುವ ಸಂಸ್ಥೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಕಳೆದ ಮೂರು ದಿನದ ಹಿಂದೆ ಹಂಪಿಯಿಂದ ಬರಬೇಕಾದ್ರೆ ಬಳ್ಳಾರಿ ಭಾಗದಲ್ಲಿ ಅಪಘಾತವಾಗಿದೆ. ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿದ್ದರಿಂದ ಪ್ರತಿಕ್ರಿಯೆ ನೀಡಲು ಬಂದಿದ್ದೇನೆ. ಅಪಘಾತದ ಬಳಿಕ ಸಾವನ್ನಪ್ಪಿದ ಯುವಕನ ಕುಟುಂಬಸ್ಥರೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಮಂತ್ರಿಯಾಗಿರುವದರಿಂದ ಹೆಚ್ಚು ಮಾತನಾಡಬಾರದು. ತನಿಖೆ ವೇಳೆ ಹೇಳಿಕೆ ನೀಡಿದ್ರೆ ಕಾನೂನಿನ ಪ್ರಕಾರ ಸರಿ ಅಲ್ಲ. ಕಾನೂನು ಮೀರಿ ಯಾರು ಇಲ್ಲ. ತನಿಖೆ ವೇಳೆ ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ.
Advertisement
Advertisement
ಅಪಘಾತವಾದ ಕಾರಿಗೂ ಹಾಗೂ ಅದು ನೋಂದಣಿ ಹೊಂದಿರುವ ಸಂಸ್ಥೆಗೂ ನಮಗೆ ಸಂಬಂಧವಿಲ್ಲ. ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು ಮತ್ತು ಎಲ್ಲರೂ ಗಾಯಗೊಂಡಿದ್ದಾರೆ. ಪೊಲೀಸರ ತನಿಖೆ ವೇಳೆ ಎಲ್ಲವೂ ಬಹಿರಂಗವಾಗಲಿದೆ. ಹಾಗಾಗಿ ಅಪಘಾತಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧ ಮಾತನಾಡಲ್ಲ. ಮಾಧ್ಯಮಗಳಲ್ಲಿ ನನ್ನ ಮಗ ಸಹ ಕಾರಿನಲ್ಲಿದ್ದ ಎಂದು ಬಿತ್ತರವಾಗುತ್ತಿದೆ. ಆದ್ರೆ ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲಾರೆ. ಅಪಘಾತದಲ್ಲಿ ಸಾವನ್ನಪ್ಪಿದವರ ಬಗ್ಗೆ ವಿಷಾದವಿದೆ ಎಂದರು.
Advertisement
Advertisement
ದಾಖಲಾಗಿರುವ ಎಫ್‍ಐಆರ್ ನಲ್ಲಿ ನನ್ನ ಮಗನ ಹೆಸರಿಲ್ಲ. ಅಪಘಾತವಾದ ಕಾರಿನಲ್ಲಿ ನನ್ನ ಮಗನಿದ್ದ ಎಂಬುದರ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದ್ರೆ ತಮ್ಮ ಮಗ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ನೀಡಲು ಸಚಿವರು ಹಿಂದೇಟು ಹಾಕಿದರು. ಈ ವೇಳೆ ಮಗನಿಗೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ನೀಡದೇ ಈಗ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಎಲ್ಲ ಪ್ರಶ್ನೆಗಳಿಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಜಾಣ ಉತ್ತರ ನೀಡಿದರು.
ಏನಿದು ಪ್ರಕರಣ?: ಕೆಎ-05, ಎಂಡಬ್ಲ್ಯು 357 ನಂಬರಿನ ಬೆಂಜ್ ಕಾರು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಇಬ್ಬರ ಬಲಿಯನ್ನು ತೆಗೆದುಕೊಂಡಿತ್ತು. ದುರ್ಗಾ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲಿನಿಂದ ವೇಗದಲ್ಲಿ ಬಂದ ಕಾರು ರಸ್ತೆ ಬದಿಯ ಚಹಾದ ಅಂಗಡಿ ಬಳಿ ನಿಂತಿದ್ದ ರವಿ ನಾಯಕ್(19) ಅವರಿಗೆ ಗುದ್ದಿದೆ. ನಂತರ ಕಾರು ಸುಮಾರು 100 ಮೀಟರ್ ದೂರದವರೆಗೆ ರವಿ ಅವರನ್ನು ಬೆಂಜ್ ಕಾರು ತಳ್ಳಿಕೊಂಡು ಹೋಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮತ್ತೀಕೆರೆ ನಿವಾಸಿ ಸಚಿನ್ ಮೃತಪಟ್ಟಿದ್ದಾರೆ.
ಕಾರು ಯಾರದ್ದು?
ಕೆಎ-05, ಎಂಡಬ್ಲ್ಯು 357 ನಂಬರಿನ ಬೆಂಜ್ ಕಾರು ಉತ್ತರಹಳ್ಳಿ ಬ್ರಾಂಚ್‍ನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಇದೆ. ಆರ್ ಟಿಓ ದಾಖಲೆಗಳಲ್ಲೂ ಇದೇ ಉಲ್ಲೇಖವಿದೆ.
ಆರೋಪಿ ಯಾರು?
ಬೆಂಗಳೂರಿನ ಶಾರದಾಂಬ ನಗರ, ಜಾಲಹಳ್ಳಿಯ ರಾಹುಲ್ (29) ಎ1 ಆರೋಪಿಯಾಗಿದ್ದಾನೆ. ಪೊಲೀಸರು ಈತ ಚಾಲನೆ ಮಾಡುತ್ತಿದ್ದಾಗ ಅಪಘಾತ ನಡೆದಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಮಧ್ಯಮವರ್ಗದ ಕುಟುಂಬಸ್ಥ ರಾಹುಲ್ ತಂದೆ ಸಚಿವರ ಮಗನ ವ್ಯವಹಾರವನ್ನು ನೋಡಿಕೊಳ್ಳುತ್ತಾರೆ. ಈಗ ಅಶೋಕ್ ಮಗನನ್ನು ಪಾರು ಮಾಡಲು ತಮ್ಮ ಮಗನನ್ನೇ ಪ್ರಕರಣದಲ್ಲಿ ಸಿಲುಕಿಸಿದ್ರಾ? ಈ ಮೂಲಕ ಸಚಿವರ ಮಗನ ಋಣ ತೀರಿಸಿದ್ರಾ ಎನ್ನುವ ಪ್ರಶ್ನೆ ಎದ್ದಿದೆ.