ಬೆಂಗಳೂರು: ರಾಮನಗರ ಜಿಲ್ಲೆ ಕನಕಪುರ ತಾಲೂಕು ಉಯ್ಯಂಬಳ್ಳಿ ಕಪಾಲಿ ಬೆಟ್ಟ ಈಗ ದೊಡ್ಡದಾಗಿ ಸದ್ದು ಮಾಡುತ್ತಿದೆ. ಸರ್ಕಾರಿ ಗೋಮಾಳದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಶೀಲಾನ್ಯಾಸ ನೇರವೇರಿಸಿದ್ದೆ ಈಗ ವಿವಾದ ಆಗಿದೆ.
ಯಾವುದೇ ಕಾರಣಕ್ಕೂ ಯೇಸು ಪ್ರತಿಮೆ ಸ್ಥಾಪನೆಗೆ ಅವಕಾಶ ಇಲ್ಲ ಎಂದು ಬಿಜೆಪಿ ಅಬ್ಬರಿಸಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವರ್ಸಸ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ನಡುವೆ ದೊಡ್ಡ ಮಟ್ಟದ ರಾಜಕೀಯ ಗುದ್ದಾಟ ನಡೆದರೂ ಅಚ್ಚರಿ ಇಲ್ಲ ಎಂಬ ಮಾತು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ಏಸು ಪ್ರತಿಮೆಗೆ ಜಮೀನು- ಡಿಕೆಶಿ ಸಮರ್ಥನೆ, ಬಿಜೆಪಿ ಕಟು ಟೀಕೆ
ಈ ನಡುವೆ ಕಂದಾಯ ಸಚಿವ ಆರ್.ಅಶೋಕ್ ರಾಮನಗರ ಜಿಲ್ಲಾಧಿಕಾರಿಗೆ ವರದಿ ಕೇಳಿದ್ದಾರೆ. ಸರ್ವೆ ನಂ 283ರ ಪ್ರಕಾರ 231 ಎಕರೆ ಸರ್ಕಾರಿ ಗೋಮಾಳ ಪ್ರದೇಶ ಆಗಿದೆ. 10 ಎಕರೆ ವಿವಾದಿತ ಜಾಗದ ಬಗ್ಗೆ ವರದಿ ನೀಡಿ ಅಂತ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ನಿರ್ಮಲಾನಂದ ಶ್ರೀಗಳ ಜೊತೆಗೆ ಮಾತನಾಡಿದ್ದೇನೆ ಎಂದು ಸಚಿವರು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಚಿವ ಆರ್.ಅಶೋಕ್ ಅವರು, ಕಪಾಲಿ ಬೆಟ್ಟ ಕಾಲಭೈರವೇಶ್ವರನ ಬೆಟ್ಟ. ಈ ಬೆಟ್ಟದಲ್ಲಿ ಬೇರೆ ಏನು ಮಾಡಲು ಬಿಡುವುದಿಲ್ಲ. ಈಗಾಗಲೇ ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳೊಂದಿಗೆ ಮಾತನಾಡಿದ್ದೇನೆ. 10 ಎಕರೆ ಪ್ರದೇಶವನ್ನು ಕಪಾಲಿ ಬೆಟ್ಟದ ಅಭಿವೃದ್ಧಿ ಟ್ರಸ್ಟ್ ಹೆಸರಲ್ಲಿ ಪಡೆದಿದ್ದಾರೆ. ಡಿಕೆ ಶಿವಕುಮಾರ್ ಅವರು ಇದನ್ನ ಖರೀದಿ ಮಾಡಿಲ್ಲ. ಸರ್ಕಾರದ ಗೋಮಾಳವನ್ನು ಖರೀದಿಸಲು ಅವಕಾಶ ಇಲ್ಲ. ಸರ್ಕಾರ ಹರಾಜಿಗೂ ಹಾಕಿಲ್ಲ, ಕಪಾಲಿ ಬೆಟ್ಟದ ಅಭಿವೃದ್ಧಿ ಟ್ರಸ್ಟ್‍ಗೆ ಅಂದಿನ ಸರ್ಕಾರ ಕೊಟ್ಟಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲು ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.