Bengaluru City
ನಮ್ಮ ಕಾರ್ಯಕರ್ತರು, ಮುಖಂಡರು ಸಿಂಹದ ಮರಿಗಳು: ಪುಟ್ಟರಾಜು

-ಐಟಿ ಇಲಾಖೆಯಿಂದ ನಮ್ಮನ್ನ ಕಟ್ಟಿಹಾಕಲು ಸಾಧ್ಯವಿಲ್ಲ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಐಟಿ ಇಲಾಖೆಯವರನ್ನು ಮುಂದಿಟ್ಟುಕೊಂಡು ನಮ್ಮನ್ನು ಕಟ್ಟಿಹಾಕಬಹುದು ಎಂದುಕೊಂಡಿದ್ದರೆ ಅದು ಅವರ ಭ್ರಮೆಯಾಗಿದೆ. ನಮ್ಮನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂಬುದನ್ನು ಈ ಮೂಲಕ ಅವರಿಗೆ ಹೇಳಲು ಬಯಸುತ್ತೇನೆ. ಇಂದು 40 ಜನರಲ್ಲ, 400-ಸಾವಿರ ಜನರು ಬಂದು ಕ್ಯಾಂಪ್ ಮಾಡಿದರೂ ಮಂಡ್ಯ ಜನತೆ ಜಗ್ಗಲ್ಲ ಎಂದು ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ನಿಖಿಲ್ ಸೋಲಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಐಟಿ ಡಿಜಿ ಬಾಲಕೃಷ್ಣನ್ ಸೇರಿ ಮಂಡ್ಯದಲ್ಲಿ ಸದ್ದಿಲ್ಲದೆ ಐಟಿಯ ಕಂಟ್ರೋಲ್ ರೂಂ ತೆರೆದಿದ್ದಾರೆ ಎಂಬ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಇಂದು ಐಟಿ ಇಲಾಖೆಯ ಸಹಾಯ ಪಡೆದು ನನ್ನ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕಟ್ಟಿಹಾಕಬಹುದು ಎಂಬುದು ಅವರ ಭ್ರಮೆಯಾಗಿದೆ. ನಮ್ಮ ಕಾರ್ಯಕರ್ತರು, ಮುಖಂಡರು ಸಿಂಹದ ಮರಿಗಳು ಅಂದ್ರು.
ಜೆಡಿಎಸ್ ಭದ್ರಕೋಟೆಯಾದ ಮಂಡ್ಯದಲ್ಲಿ ಇಂದು ಕಾಂಗ್ರೆಸ್ಸಿನಲ್ಲಿ ಕೆಲವು ಮಂದಿ ವೈಯಕ್ತಿಕವಾಗಿ ನಮ್ಮ ಜೊತೆ ಕೈ ಜೋಡಿಸದೆ ಇರಬಹುದು. ಆದರೆ 100ಕ್ಕೆ 90 ಭಾಗ ಕಾಂಗ್ರೆಸ್ ಮುಖಂಡರು ನಮ್ಮ ಜೊತೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅತ್ಯಂತ ಬಹುಮತದಿಂದ ಗೆಲ್ಲಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಗೆಲುವಲ್ಲಿ ನಿಖಿಲ್ ಪಾತ್ರ:
ನಿಖಿಲ್ ಕುಮಾರಸ್ವಾಮಿ ಅವರು ಕಳೆದ ಚುನಾವಣೆಯ ಪ್ರಚಾರದಲ್ಲಿ ಬೀದಿ ಬೀದಿ ಸುತ್ತಿದ್ದಾರೆ. ಏಳು ವಿಧಾನಸಭಾ ಕ್ಷೇತ್ರದಲ್ಲಿ, ಏಳು ಜನ ಅತ್ಯಂತ ಪ್ರಚಂಡ ಬಹುಮತದಲ್ಲಿ ಗೆಲುವು ಸಾಧಿಸಲು ನಿಖಿಲ್ ಅವರ ವಿಶೇಷವಾದ ಕೊಡುಗೆ ಇದೆ. ಅವರ ತಂದೆಗೆ ಹುಷಾರಿಲ್ಲ ಎಂಬ ಕಾರಣದಿಂದ ನಾನು ಗೆಲ್ಲಲೂ ಸಾಧ್ಯವಿಲ್ಲ ಎಂದಿದ್ದ ಕ್ಷೇತ್ರದಲ್ಲಿ ಜವಾಬ್ದಾರಿ ಹೊತ್ತಿದ್ದರು. ಕೊನೆಗೆ ಕೆಲಸ ಮಾಡಿ 25 ಸಾವಿರ ಲೀಡ್‍ನಲ್ಲಿ ಗೆಲ್ಲಿಸಿದ್ದಾರೆ ಎಂದು ನಿಖಿಲ್ ಸಾಧನೆಯನ್ನು ಸಚಿವರು ಕೊಂಡಾಡಿದರು.
