ರಾಯಚೂರು: ಸಾಲಮನ್ನಾ ವಿಷಯ ದಲ್ಲಿ ಮುಖ್ಯಮಂತ್ರಿಗಳು ಗಿಡ ನೆಟ್ಟಿಲ್ಲ ಎಂದು ಹೇಳಿದ್ದಕ್ಕೆ ಅಪಾರ್ಥ ಬೇಡ, ಸಾಲಮನ್ನಾ ವಿಷಯದಲ್ಲಿ ಸ್ವಲ್ಪ ತಾಳ್ಮೆ ಇರಬೇಕು ಅಂತ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಖರ್ಗೆ ಸಾಲಮನ್ನಕ್ಕಾಗಿ ಭಾರೀ ಮೊತ್ತದ ಹಣ ಕೂಡಿಸಬೇಕಾಗಿದೆ, ಹೇಗೊ ಒಟ್ಟಾರೆಯಾಗಿ ಸಾಲಮನ್ನಾ ಮಾಡುತ್ತೇವೆ. ಉತ್ತರ ಕರ್ನಾಟಕದಲ್ಲಿ ಹೈದರಾಬಾದ್ ಕರ್ನಾಟಕದವರು ಕಷ್ಟ ಪಟ್ಟು ಒಂದಾಗಿದ್ದೇವೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಬೇಕಿಲ್ಲ. ಪ್ರತ್ಯೇಕ ರಾಜ್ಯ ಕೇಳಿದವರು ರಾಜ್ಯಕ್ಕಾಗಿ ಬೆವರು ಸುರಿಸಿದವರಲ್ಲ ಅಂತ ವಾಗ್ದಾಳಿ ನಡೆಸಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡ ಅನುದಾನದ ಖರ್ಚು ಆಗುತ್ತಿಲ್ಲ ಎನ್ನುವುದು ಸರಿ ಅಲ್ಲ. ವಿಶೇಷ ಘಟಕ ಯೋಜನೆಯಲ್ಲಿ ಹೆಚ್ಚು ಅನುದಾನ ಬಳಕೆ ಮಾಡಲಾಗುತ್ತಿದೆ. 2013 ವಿಶೇಷ ಘಟಕದ ತಿದ್ದುಪಡಿ ಜಾರಿಗೆ ಬಂದ ನಂತರ ಏನಾಗಿದೆ ಎನ್ನುವುದನ್ನು ಬಹಿರಂಗ ಪಡಿಸುತ್ತೇವೆ ಎಂದರು. ಸದಾಶಿವ ಆಯೋಗದ ವರದಿಯ ಬಗ್ಗೆ ಕಾನೂನು ಇಲಾಖೆಗೆ ಕಳುಹಿಸಿದ್ದೇವೆ ಒಪ್ಪಿಗೆ ಬಂದ ನಂತರ ಜಾರಿಗೆ ನಿರ್ಧರಿಸುತ್ತೇವೆ ಎಂದರು.
ಕೇಂದ್ರ ಸರ್ಕಾರ ಎಸ್ಸಿ ಎಸ್ಟಿ ಕಾಯ್ದೆ ವಿಧೇಯಕ ಜಾರಿಗೆ ತಂದಿದೆ, ಈಗಲಾದರೂ ಕೇಂದ್ರ ಸರ್ಕಾರಕ್ಕೆ ಅನುಭವವಾಗಿದೆ. ದಲಿತ ಸಂಘಟನೆಗಳ ಹೋರಾಟದಿಂದಾಗಿ ಹತ್ತು ದಿನಗಳಲ್ಲಿ ವಿಧೇಯಕಕ್ಕೆ ತಿದ್ದುಪಡಿ ತಂದಿದೆ ಅಂತ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews