ಉಡುಪಿ: ವಿಧಾನಸಭಾ ಚುನಾವಣೆ ಘೋಷಣೆಯಾಗಿ 24 ಗಂಟೆ ಆಗುವುದರೊಳಗೆ ಜಿಲ್ಲಾಡಳಿತದ ಅಧಿಕಾರಿಗಳು ಬೇಟೆ ಶುರು ಮಾಡಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನದ ಮೇಲೆ ಚುನಾವಣಾಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.
ನಗರದ ಪ್ರವಾಸಿ ಬಂಗಲೆಯಿಂದ ಪ್ರಚಾರಕ್ಕೆಂದು ಹೊರಟ ವಾಹನವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪರವಾನಿಗೆಗೆ ಪತ್ರ ರವಾನಿಸಲಾಗಿತ್ತು. ಆದ್ರೆ ಪ್ರಚಾರದ ಸ್ಥಳ, ಸಮಯವನ್ನು ನಿಗದಿಪಡಿಸಿರಲಿಲ್ಲ. ಪರವಾನಿಗೆ ಪಡೆಯದೆ ಪ್ರಚಾರಕ್ಕೆ ಬಳಸಿದ ಆರೋಪದಡಿಯಲ್ಲಿ ನಗರ ಸಂಚಾರಿ ಪೊಲೀಸರು ವಾಹನವನ್ನು ಸೀಜ್ ಮಾಡಿ ನಗರ ಠಾಣೆಗೆ ಕೊಂಡೊಯ್ದಿದ್ದಾರೆ.
Advertisement
Advertisement
ಪ್ರಚಾರ ವಾಹನದಲ್ಲಿ ಎರಡು ದಿನದ ಹಿಂದಷ್ಟೇ ಕಾಂಗ್ರೆಸ್ ಪಕ್ಷದ ಕೈ ಚಿಹ್ನೆ ಹಾಕಿಸಿದ್ದರು. ಪ್ರೊಬೆಶನರಿ ಐಎಎಸ್ ಅಧಿಕಾರಿ ಪೂವಿತಾ ನೇತೃತ್ವದಲ್ಲಿ ಇಂದು ದಾಳಿಯಾಗಿದ್ದು, ತಹಶಿಲ್ದಾರ್ ಮತ್ತು ಚುನಾವಣಾ ಅಧಿಕಾರಿಗಳು ಸ್ಥಳದಲ್ಲಿದ್ದರು.
Advertisement
ಬಿಜೆಪಿ ಸೇರುವ ಬಗ್ಗೆ ಸ್ಪಷ್ಟನೆ: ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ತಾರೆ ಎಂಬ ಊಹಾಪೋಹಗಳಿಗೆ ಸಚಿವರು ಮೊದಲ ಬಾರಿಗೆ ಬಹಿರಂಗವಾಗಿಯೇ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮೊದಲ ಬಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಮೌನ ಮುರಿದಿದ್ದಾರೆ.
Advertisement
ಸಚಿವ ಮಧ್ವರಾಜ್ ಬಿಜೆಪಿ ಸೇರೋ ಬಗ್ಗೆ ಕಳೆದ ಹಲವು ದಿನಗಳಿಂದ ಭಾರೀ ಚರ್ಚೆ ಆಗುತ್ತಿತ್ತು. ಈ ಬಗ್ಗೆ ಮಧ್ವರಾಜ್ ಕೂಡ ಬಿಜೆಪಿ ಸೇರಲ್ಲ ಎಂದು ಮಾಧ್ಯಮಗಳ ಮುಂದೆ ಬಹಳ ಕೂಲ್ ಆಗಿ ಸ್ಪಷ್ಟನೆ ನೀಡುತ್ತಾ ಬಂದಿದ್ರು. ಕೆಲ ದಿನಗಳ ಹಿಂದೆ ಬಿಜೆಪಿ ಗೇಟು ಮುಚ್ಚಿದೆ. ಗೇಟು ಮುಚ್ಚಿರೋದ್ರಿಂದ ಹೋಗೋ ಪರಿಸ್ಥಿತಿ ಬರಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟು ಮಾತಾಡಿದ್ರು.
ಮಂಗಳವಾರ ದೆಹಲಿಯಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿರುವ ಸುದ್ದಿಯೂ ಹರಡಿದ್ದು, ಇದಕ್ಕೆ ಪ್ರಮೋದ್ ಮಧ್ವರಾಜ್ ಕೂಡ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಅದೆಷ್ಟೋ ಬಾರಿ ಹೇಳಿದ್ದೇನೆ ನಾನು ಯಾವ ಪಕ್ಷಕ್ಕೂ ಸೇರಲ್ಲ ಎಂದು ಈಗಲೂ ಹೇಳುತ್ತೇನೆ ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
https://twitter.com/PMadhwaraj/status/978873976641478656