ಉಡುಪಿ: ವಿವಾದಿತ ಮತ್ತು ರಾಜ್ಯ ಸರ್ಕಾರದ ಪ್ರತಿಷ್ಟೆಯ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಿಂದ ಸಚಿವ ಪ್ರಮೋದ್ ಮಧ್ವರಾಜ್ ದೂರ ಉಳಿದು ಚರ್ಚೆಗೆ ಕಾರಣವಾಗಿದ್ದಾರೆ.
ಉಡುಪಿಯಲ್ಲಿ ಇದ್ದುಕೊಂಡೇ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿಲ್ಲ. ಟಿಪ್ಪು ಜಯಂತಿ ಮುಗಿದು ಹತ್ತೇ ನಿಮಿಷಕ್ಕೆ ಪ್ರಮೋದ್ ಮಧ್ವರಾಜ್ ಜಿಲ್ಲಾಧಿಕಾರಿ ಕಚೇರಿಗೆ ಅಗಮಿಸಿ ಚುನಾವಣಾ ರಾಜಕೀಯದ ದೃಷ್ಟಿಕೋನವನ್ನು ತೆರೆದಿಟ್ಟರು.
Advertisement
Advertisement
ಮೂರನೇ ವರ್ಷವೂ ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳದೇ ದೂರ ಉಳಿಯುವ ಮೂಲಕ ಸೈಲೆಂಟಾಗಿ ಸಂದೇಶವನ್ನು ರವಾನೆ ಮಾಡಿದ್ದಾರೆ. ಹಿಂದೂಗಳ ಮತಗಳನ್ನು, ಕ್ರೈಸ್ತ ಸಮುದಾಯದ ಮತಗಳನ್ನು ಕಳೆದುಕೊಳ್ಳಲು ಇಚ್ಛಿಸದ ಮಧ್ವರಾಜ್ ವಿವಾದಿತ ಟಿಪ್ಪು ಜಯಂತಿಯಿಂದ ದೂರ ನಿಂತಿದ್ದಾರೆ. ಗೈರಾಗುವುದರ ಮೂಲಕ ಕರಾವಳಿಯ ಪ್ರಭಲ ಮೀನುಗಾರ ಸಮುದಾಯದ ಕಣ್ಣಲ್ಲೂ ಹೀರೋ ಎನಿಸಿಕೊಂಡಿದ್ದಾರೆ.
Advertisement
Advertisement
ಟಿಪ್ಪು ಜಯಂತಿ ಮುಗಿದು ಹತ್ತೇ ನಿಮಿಷಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಅನಿಲಭಾಗ್ಯ ಯೋಜನೆಯ ಅನುಷ್ಟಾನದ ಪೂರ್ವಭಾವಿ ಸಭೆಯಲ್ಲಿ, ಸಿಎಂ ಉಡುಪಿ ಪ್ರವಾಸದ ಕಾರ್ಯಕ್ರಮದ ಮೀಟಿಂಗ್‍ನಲ್ಲಿ ಮಧ್ವರಾಜ್ ಪಾಲ್ಗೊಂಡರು. ಟಿಪ್ಪು ಜಯಂತಿಯಲ್ಲಿ ತನ್ನ ಗೈರನ್ನು ಸಮರ್ಥನೆ ಮಾಡಿಕೊಂಡ ಮಧ್ವರಾಜ್, ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಬೇಕೆಂಬ ಕಡ್ಡಾಯವೇನಿಲ್ಲ ಎಂದರು.
ನಾನು ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ, ಹೇಮರೆಡ್ಡಿ ಮಲ್ಲಪ್ಪ ಜಯಂತಿಯಲ್ಲೂ ಪಾಲ್ಗೊಂಡಿಲ್ಲ. ಆಗ ಯಾಕೆ ನೀವು ಪ್ರಶ್ನೆ ಮಾಡಿಲ್ಲ? ಅವರವರಿಗೆ ಅವರವರ ಅಭಿಪ್ರಾಯ ಸ್ವಾತಂತ್ರ್ಯವಿದೆ ಎಂದು ತನ್ನ ಗೈರನ್ನು ಸಮರ್ಥನೆ ಮಾಡಿಕೊಂಡರು. ನನ್ನ ಗೈರಿನ ಬಗ್ಗೆ ಮಾಧ್ಯಮದವರು ವಿಮರ್ಶೆ ಮಾಡುವುದಾದದರೆ ನನ್ನ ಅಭ್ಯಂತರವಿಲ್ಲ ಎಂದರು.
ಜಿಲ್ಲಾಡಳಿತದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ ಸುಮಾರು 50 ಮಂದಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯ್ತು. ಸುಮಾರು 2000 ಪೊಲೀಸರನ್ನು ಉಡುಪಿ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಿದರು.
ಅಧಿಕಾರಿಗಳು, ಮಕ್ಕಳ ಜಮಾವಣೆ: ಡಿ.ಸಿ ಕೋರ್ಟ್ ಹಾಲ್ ನಲ್ಲಿ ಟಿಪ್ಪು ಜಯಂತಿ ಆಚರಿಸುವ ನಿರ್ಧಾರವಾಗಿತ್ತು. ಆದ್ರೆ ಪ್ರತಿಷ್ಟೆಯಾಗಿ ತೆಗೆದುಕೊಂಡ ಉಡುಪಿ ಜಿಲ್ಲಾಡಳಿತ ವಾಜಪೇಯಿ ಸಭಾಂಗಣಕ್ಕೆ ಶಿಫ್ಟ್ ಮಾಡಿತು. ಜಿಲ್ಲಾಧಿಕರಿ ಕಚೇರಿ, ಜಿಲ್ಲಾ ಪಂಚಾಯತ್‍ನ ಎಲ್ಲಾ ಅಧಿಕಾರಿ ವರ್ಗ, ಸಿಬ್ಬಂದಿಗಳನ್ನು ಸಭಾಂಗಣದಲ್ಲಿ ಕಡ್ಡಾಯವಾಗಿ ಇರುವಂತೆ ನೋಡಿಕೊಂಡಿತು. ಶಾಲೆಯ ಮಕ್ಕಳನ್ನು ಕರೆದುಕೊಂಡು ಬಂದು ಖಾಲಿ ಕುರ್ಚಿಗಳನ್ನು ತುಂಬಿಸಲಾಯ್ತು. ಜನ ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪೊಲೀಸ್ ಫೋರ್ಸನ್ನೂ ಉಪಯೋಗಿಸಿಕೊಳ್ಳಲಾಯ್ತು ಅನ್ನೋ ಮಾಹಿತಿಯಿದೆ.