ಬೀದರ್: ಮುಂದಿನ ತಿಂಗಳು ಮೂರು ದಿನಗಳ ಕಾಲ ಬೀದರ್ ನ ಪಶು ವಿವಿಯಲ್ಲಿ ನಡೆಯಲಿರುವ ಪಶುಮೇಳದ ಪೂರ್ವಭಾವಿ ಸಿದ್ಧತೆ ಸಭೆ ಇಂದು ಕರೆಯಲಾಗಿತ್ತು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಪ್ರತಿಯೊಂದು ವಿಭಾಗದ ಅಧಿಕಾರಿಗಳನ್ನು ಕರೆದು ಸಿದ್ಧತೆ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಈ ವೇಳೆ ನಗರಸಭೆ ಆಯುಕ್ತರು ಸೇರಿದಂತೆ ಬಹುತೇಕ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದರು.
Advertisement
Advertisement
ಅಧಿಕಾರಿಗಳು ಗೈರಾಗಿದ್ದು ಕಂಡು ಕೆಂಡಾಮಂಡಲರಾದ ಸಚಿವ ಪ್ರಭು ಚೌವ್ಹಾಣ್ ಮಾಹಿತಿ ಇದ್ದರೂ ಯಾಕೆ ಅಧಿಕಾರಿಗಳು ಗೈರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ ಗೆ ಕೇಳಿದರು. ಸಮರ್ಪಕ ಉತ್ತರ ಸಿಗದಿದ್ದಾಗ ಜಿಲ್ಲಾ ಪಂಚಾಯತ್ ಸಿಇಓ ಗ್ಯಾನೇಂದ್ರಕುಮಾರ್ ಗೆ ಗೈರಾದ ಎಲ್ಲಾ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚನೆ ನೀಡಿದರು.
Advertisement
ಮುಂದಿನ ತಿಂಗಳು 07 ರಿಂದ 09ರವರೆಗೆ ನಡೆಯಲಿರುವ ಪಶು ಮೇಳವನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದು, ಈ ಮೇಳದ ಪೋಸ್ಟರ್ ಅನ್ನು ಇಂದು ಸಚಿವರು ಬಿಡುಗಡೆ ಮಾಡಿದರು. ಎಂಎಲ್‍ಸಿ ರಘುನಾಥ್ ಮಲ್ಕಾಪೂರೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತ ಚಿದ್ರಿ, ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ್, ಜಿಲ್ಲಾ ಪಂಚಾಯ್ತಿ ಸಿಇಓ ಗ್ಯಾನೇಂದ್ರ ಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪೂರ್ವ ಸಭೆಯಲ್ಲಿ ಭಾಗಿಯಾಗಿದ್ದರು.