ಯಾದಗಿರಿ: ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಯಾರೆಂದು ಗೊತ್ತಿರದೆ ಬಿಇಓ ಕಚೇರಿಯ ಸಿಬ್ಬಂದಿ ಪೇಚಿಗೆ ಸಿಲುಕಿದ ಘಟನೆ ಯಾದಗಿರಿಯಲ್ಲಿ ಇಂದು ನಡೆದಿದೆ. ಸ್ವತಃ ಸಚಿವರೆದುರೇ ನೀವು ಯಾರು ಅಂತ ಕೇಳಿ, ಯಾದಗಿರಿ ಬಿಇಓ ಕಚೇರಿಯ ವ್ಯವಸ್ಥಾಪಕ ಲಕ್ಷ್ಮೀಕಾಂತ್ ರೆಡ್ಡಿ ಸಚಿವರನ್ನು ಮುಜುಗರಕ್ಕೀಡು ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಭು ಚವ್ಹಾಣ್ ಅವರು ಇಂದು ನಗರದ ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳ ಹಾಜರಾತಿ ಮತ್ತು ಕಾರ್ಯವೈಖರಿಯನ್ನು ಪರಿಶೀಲಿಸಿದರು. ಈ ವೇಳೆ ನಗರದ ಬಿಇಓ ಕಚೇರಿಗೂ ಭೇಟಿ ನೀಡಿದರು. ಸಚಿವ ದಿಢೀರ್ ಭೇಟಿಯಿಂದ ಕಕ್ಕಾಬಿಕ್ಕಿಯಾದ ಅಧಿಕಾರಿಗಳನ್ನು ಸಚಿವರು ಚಳಿ ಬಿಡಿಸಿದರು.
Advertisement
Advertisement
ಈ ವೇಳೆ ನಾನು ಯಾರು ಅಂತ ಅಧಿಕಾರಿಗಳಿಗೆ ಪ್ರಶ್ನಿಸಿದರು. ಲಕ್ಷ್ಮೀಕಾಂತ್ ರೆಡ್ಡಿ ಸಚಿವರ ಹೆಸರು ಹೇಳಲಿಲ್ಲ. ಇದರಿಂದ ಗರಂ ಆದ ಸಚಿವರು ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ತರಾಟೆ ತೆಗೆದುಕೊಂಡರು. ನಾನು ಯಾರು ಅಂತ ಗೊತ್ತಿಲ್ಲ ಅಂದ್ರೆ ಇಲಾಖೆ ಹೇಗೆ ಉದ್ದಾರ ಮಾಡ್ತಿರಾ? ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಗೊತ್ತಿಲ್ಲ ಅಂದ್ರೆ ಹೇಗೆ? ಇನ್ನು ಕೆಲ್ಸಾ ಹೇಗೆ ಮಾಡ್ತಿರಾ ಎಂದು ಹಿಗ್ಗಾಮುಗ್ಗಾ ಬೈದರು.
Advertisement
ಈ ಹಿಂದೆಯೂ ಬೀದರ್ ನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಪಶು ಸಂಗೋಪನೆ ಸಚಿವರು ಬೀದರ್ ಜಿಲ್ಲೆಯ ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಮದ್ಯ ಸೇವಿಸಿ, ಗುಟ್ಕಾ ಹಾಕಿಕೊಂಡು ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೆ ನಾನು ಯಾರು ಎಂದು ಸಿಬ್ಬಂದಿಗೆ ಪ್ರಶ್ನಿಸಿದ್ದರು. ಆದರೆ ಸಿಬ್ಬಂದಿ ಸಚಿವರ ಹೆಸರು ಗೊತ್ತಿಲ್ಲದೆ ಪೇಚಿಗೆ ಸಿಲುಕಿದ್ದ. ಇದರಿಂದಾಗಿ ಇಲಾಖೆ ಸಿಬ್ಬಂದಿಯೇ ತಮ್ಮ ಹೆಸರು ಹೇಳದ್ದಕ್ಕೆ ಸಚಿವರು ಕೂಡ ಮುಜುಗರಕ್ಕೆ ಒಳಗಾಗಿದ್ದರು.