ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಹಳೆ ಮೈಸೂರು ಭಾಗದ ಹಲವು ಶಾಸಕರು ಮಂತ್ರಿಯಾಗಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಓರ್ವ ಶಾಸಕನಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ.
ಹೌದು. ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಯಾವ ಜಿಲ್ಲೆಗಳಿಗೂ ಸಿಎಂ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಮೈಸೂರು, ಮಡಿಕೇರಿ, ಹಾಸನ, ಚಾಮರಾಜನಗರ ಭಾಗದಲ್ಲಿ ಎಂಟು ಶಾಸಕರು ಇದ್ದರು ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.
ಕಡೆ ಕ್ಷಣದವರೆಗೂ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ. ಅನಂತಕುಮಾರ್ ನಿಧನ, ವೈಯಕ್ತಿಕವಾದ ಕೇಸ್ ಗಳು, ಎಚ್. ವಿಶ್ವನಾಥ್ ಎಫೆಕ್ಟ್, ಆರ್ ಎಸ್‍ಎಸ್ ನಲ್ಲಿ ರಾಮದಾಸ್ ಪರ ಗಟ್ಟಿಯಾಗಿ ಮಾತನಾಡುವವರು ಇಲ್ಲದ ಕಾರಣ ಮಂತ್ರಿ ಸ್ಥಾನ ತಪ್ಪಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.
ಕೊಡಗಿನ ಅಪ್ಪಚ್ಚು ರಂಜನ್ ಅಥವಾ ಬೋಪಯ್ಯ ಇಬ್ಬರ ಪೈಕಿ ಒಬ್ಬರಿಗೆ ಮಂತ್ರಿ ಸ್ಥಾನ ಸಿಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಕೊನೆಗೆ ಬೋಪಯ್ಯ ಅವರಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತ ಎನ್ನುವ ವಿಚಾರ ಬಿಜೆಪಿ ಮೂಲಗಳಿಂದ ಪ್ರಕಟವಾಗಿತ್ತು. ಆದರೆ ಈಗ ಇಬ್ಬರಿಗೂ ಮಂತ್ರಿ ಸ್ಥಾನ ಕೈ ತಪ್ಪಿದೆ.
ಕುಮಾರಸ್ವಾಮಿ ಸರ್ಕಾರದಲ್ಲಿ ರೇವಣ್ಣ, ಜಿಟಿ ದೇವೇಗೌಡ, ಸಿಎಸ್ ಪುಟ್ಟರಾಜು, ಎನ್ ಮಹೇಶ್, ಸಾ.ರಾ. ಮಹೇಶ್, ಪುಟ್ಟರಂಗ ಶೆಟ್ಟಿ, ಡಿಸಿ ತಮ್ಮಣ್ಣ ಮಂತ್ರಿ ಸ್ಥಾನ ಪಡೆದಿದ್ದರು.