ಚಿತ್ರದುರ್ಗ: 2008ರಲ್ಲಿ ದಕ್ಷಿಣ ಭಾರತದಲ್ಲಿ ಹಾಗೂ ಪ್ರಥಮ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾದ ಹೊಸದುರ್ಗ ಶಾಸಕ ಗೂಳಿ ಹಟ್ಟಿ ಶೇಖರ್‍ಗೆ ಸಚಿವ ಸ್ಥಾನ ನೀಡದೇ ಮೋಸ ಮಾಡಿದ್ದಾರೆ ಎಂದು ಬೆಂಬಲಿಗರು ಪ್ರತಿಭಟನೆ ನಡೆಸಿ ಅಸಮಾಧಾನವನ್ನು ಹೊರಹಾಕಿದ್ದಾರೆ.
ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಸಚಿವ ಸ್ಥಾನ ನೀಡದ್ದನ್ನು ಖಂಡಿಸಿ, ಹೊಸದುರ್ಗದ ಟಿಬಿ ಸರ್ಕಲ್ ಬಳಿ ಟೈರ್‍ಗೆ ಬೆಂಕಿ ಹಚ್ಚಿ ಬೆಂಬಲಿಗರು ಪ್ರತಿಭಟನೆ ನಡೆಸಿ, ಕೂಡಲೇ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.
Advertisement
Advertisement
ಒಂದೆಡೆ ಇದೇ ಜಿಲ್ಲೆಯ ಶಾಸಕ ತಿಪ್ಪಾರೆಡ್ಡಿ ಬೆಂಬಲಿಗರು ಬೈಕಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಗೂಳಿಹಟ್ಟಿ ಶೇಖರ್ ಬೆಂಬಲಿಗರು ಸಹ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಬೆಳಗಾವಿಯಲ್ಲಿ ಸಹ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಕಾಂಗ್ರೆಸ್ ನಾಯಕರು ಸಹ ಇದಕ್ಕೆ ಪ್ರತಿಯಾಗಿ ವಾಗ್ದಾಳಿ ನಡೆಸುತ್ತಿದ್ದು, ಕಾಂಗ್ರೆಸ್ ಶಾಸಕ ಅಮರೇಗೌಡ ಈ ಸರ್ಕಾರ ಅವಧಿ ಕೇವಲ 6 ತಿಂಗಳು ಮಾತ್ರ. ಈಗಾಗಲೇ ಬಂಡಾಯ ಶುರುವಾಗಿದೆ. ಸಂಜೆ ಹೊತ್ತಿಗೆ ಬಂಡಾಯದ ಕಾವು ಇನ್ನೂ ಹೆಚ್ಚಾಗಲಿದೆ. ಹೀಗಾಗಿ ಸರ್ಕಾರ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ಗೂಳಿಹಟ್ಟಿ ಶೇಖರ್, 2008ರಲ್ಲಿ ಅನ್ಯಾಯವಾಗಿತ್ತು ಅದನ್ನು ಸರಿ ಪಡಿಸಿ ಎಂದು ಕೇಳಿದ್ದೆ. ಈ ಕುರಿತು ಯಡಿಯೂರಪ್ಪನವರು ಹಾಗೂ ಅಶ್ವತ್ಥನಾರಾಯಣ ಅವರಿಗೆ ತಿಳಿಸಿದ್ದೆ. ಹೊರಗಿನಿಂದ ಬಂದವರಿಗೆ ಕಷ್ಟ ಆಗಬಹುದು ಎಂದು ಹೇಳಿದ್ದರು. ಆರ್.ಅಶೋಕ್ ಸಚಿವ ಸ್ಥಾನ ಕೊಡಿಸುವುದಾಗಿ ಹೇಳಿದ್ದರು. ಆದರೆ ಯಾವುದೂ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದು ಹಬ್ಬಿಸಿದ್ದರು. ನಾನು ಆ ರೀತಿ ಮಾಡಲಿಲ್ಲ. ನಾನು ಹೊಸಬ, ನನಗೆ ಬಿಜೆಪಿ ಹೈ ಕಮಾಂಡ್ ಹಾಗೂ ನಾಯಕರು ಯಾರೂ ಅಷ್ಟು ಪರಿಚಯವಿಲ್ಲ. ಇದೀಗ ನನಗೆ ಬಿಜೆಪಿ ಸೇರಿದ್ದು ತಪ್ಪು. ನಾನು ಪಕ್ಷೇತರನಾಗಿಯೇ ಇರಬೇಕಿತ್ತು ಎಂದು ಅನ್ನಿಸುತ್ತಿದೆ. ಮುಂದಿನ ಬಾರಿ ಸಿಗುತ್ತದೆ ಎಂದು ಸಹ ಭರವಸೆ ಇಟ್ಟುಕೊಂಡಿಲ್ಲ. ಆದರೆ, ಇದೀಗ ಸಂಪುಟದಿಂದ ಕೈ ಬಿಟ್ಟಿರುವುದು ನನಗೆ ಬೇಸರವಾಗಿದೆ. ನಮ್ಮದೇ ಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ನಮ್ಮ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುತ್ತಾರೆ, ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು ಎಂಬ ಭರವಸೆಯನ್ನು ಇಟ್ಟುಕೊಂಡಿದ್ದೇನೆ. ಆದರೆ ಕಾದು ನೋಡಬೇಕು ಎಂದು ತಿಳಿಸಿದರು.