ಬಳ್ಳಾರಿ: ಪಿಎಸ್‍ಐ ಒಬ್ಬರಿಗೆ ಮುಜರಾಯಿ ಸಚಿವರ ಪಿಎ ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮ್ಕಿ ಹಾಕಿದ ಘಟನೆ ನಡೆದಿದೆ. ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿಯವರ ಪಿಎ ಸಾಲಿಮಠ, ಕೊಟ್ಟೂರಿನ ಪಿಎಸ್‍ಐ ತಿಮ್ಮಣ್ಣ ಎಂಬವರಿಗೆ ಧಮ್ಕಿ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಕೂಡ್ಲಿಗಿ ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ನಡೆದ ಕೊಟ್ಟೂರಿನ ಗುರುಬಸವೇಶ್ವರ ರಥ ಲೋಕಾರ್ಪಣೆ ಸಮಾರಂಭದಲ್ಲಿ ವೇದಿಕೆ ಹತ್ತುವ ವೇಳೆಯಲ್ಲಿ ಸಚಿವರ ಪಿಎ ಪೊಲೀಸ್ ಅಧಿಕಾರಿಗೆ ನಿಂದನೆ ಮಾಡಿದ್ದಾರೆ. ವೇದಿಕೆಯ ಮೇಲೆ ಸಾಕಷ್ಟು ಅತಿಥಿಗಳಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸಚಿವರ ಪಿಎ ಎಂದು ತಿಳಿಯದೇ ವೇದಿಕೆ ಹತ್ತಲು ಬಿಡಲಿಲ್ಲ. ಈ ವೇಳೆ ಸಚಿವರ ಪಿಎ ಪಿಎಸ್‍ಐ ಗೆ ನಿಂದಿಸಿದರು. ನಂತರ ವೇದಿಕೆ ಬಳಿಯಿದ್ದ ಜನರು ಇಬ್ಬರನ್ನೂ ಸಮಾಧಾನಪಡಿಸಿ ಪಿಎಯನ್ನು ವೇದಿಕೆ ಹತ್ತಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತು.
ಕಳೆದ ವರ್ಷ ರಥೋತ್ಸವದ ವೇಳೆ ಮಗುಚಿ ಬಿದ್ದಿದ್ದ ಕೊಟ್ಟೂರಿನ ಶ್ರೀ ಗುರು ಬಸವೇಶ್ವರ ರಥವನ್ನು ನೂತನವಾಗಿ ರಚಿಸಲಾಗಿದೆ. 2 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಈ ರಥವನ್ನು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಉಜ್ಜಯಿನಿ ಶ್ರೀ ಸಿದ್ಧಲಿಂಗ ಶಿವಾರ್ಚಾರ್ಯ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದ್ದಾರೆ.
ಕೊಟ್ಟೂರಿನಲ್ಲಿ ನೂತನವಾಗಿ ನಿರ್ಮಿಸಿದ ರಥ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟನೆ ಮಾಡಿದ ಗಣ್ಯರು, ವರ್ಷದೊಳಗೆ ನೂತನ ರಥ ನಿರ್ಮಾಣಕ್ಕೆ ನೆರವು ನೀಡಿದ ಸರ್ಕಾರ ಹಾಗೂ ಭಕ್ತರನ್ನು ಸ್ಮರಿಸಿದರು.