ಬೆಂಗಳೂರು: ನಾನು ನಿರಪರಾಧಿಯಾಗಿದ್ದು, ಯಾವುದೇ ಒತ್ತಡಗಳಿಗೆ ಒಳಗಾಗದೇ ಸ್ವಯಂ ಪ್ರೇರಿತನಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ನಾಗೇಂದ್ರ (Nagendra) ತಿಳಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Karnataka Maharshi Valmiki Scheduled Tribe Development Corporation Ltd) ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ನೀಡುವ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 10 ದಿನದಿಂದ ಮಾಧ್ಯಮಗಳಲ್ಲಿ ವರದಿ ಬರುತ್ತಿತ್ತು. ಜನರು ಆತಂಕಗೊಂಡಿದ್ದರು. ವಿಪಕ್ಷಗಳು 10 ದಿನದಿಂದ ಆರೋಪಿಸುತ್ತಿದ್ದರು. ನಾನು ನನ್ನ ಸ್ವ-ನಿರ್ಧಾರದಿಂದ ರಾಜೀನಾಮೆ ಕೊಡುತ್ತಿದ್ದೇನೆ. ಸ್ವ-ಇಚ್ಚೆಯಿಂದ ರಾಜೀನಾಮೆ ಕೊಡ್ತೀನಿ. ಇಂದು ಸಂಜೆ 7.30ಕ್ಕೆ ಸಿಎಂ ಭೇಟಿಯಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ರಾಜೀನಾಮೆ ಪತ್ರವನ್ನ ಸಿಎಂಗೆ ಕೊಟ್ಟು ಬರುತ್ತೇನೆ. ಸಿಎಂ, ಡಿಸಿಎಂ ಇಬ್ಬರಿಗೂ ಕೊಡುತ್ತೇನೆ. ಯಾರಿಗೂ ಮುಜುಗರ ಆಗಬಾರದೆಂದು ರಾಜೀನಾಮೆ ನೀಡುತ್ತಿದ್ದೇನೆ. ಪ್ರಕರಣದಲ್ಲಿ ಎಲ್ಲಿಯೂ ಕೂಡ ನನ್ನ ಹೆಸರು ಪ್ರಸ್ತಾಪ ಆಗಿಲ್ಲ. ನನ್ನ ಆತ್ಮಸಾಕ್ಷಿಯಾಗಿ ನಾನು ರಾಜೀನಾಮೆ ಕೊಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ
ತನಿಖೆ ನಿಷ್ಪಕ್ಷಪಾತವಾಗಿ ಆಗಬೇಕು. ನಾನು ಮಂತ್ರಿ ಸ್ಥಾನದಲ್ಲಿ ಇದ್ದರೆ ತೊಂದರೆ ಆಗಬಾರದು ಅಂತಾ ರಾಜೀನಾಮೆ ಕೊಡುತ್ತಿದ್ದೇನೆ. ಆರೋಪ ನಿರಾಧಾರವಾಗಿ ನಾನು ನಿದೋಶಿ ಎಂದು ಸಾಬೀತಾದ ಬಳಿಕ ಮುಖ್ಯಮಂತ್ರಿಗಳು ಅವಕಾಶ ಮಾಡಿ ಕೊಡುತ್ತಾರೆ. ಸಿಎಂ ಹಾಗೂ ಡಿಸಿಎಂ ರಾಜೀನಾಮೆ ನೀಡಬೇಡಿ ಅಂದಿದ್ದಾರೆ ಎಂದರು.
ಇಡೀ ಪ್ರಕರಣ ಯಾವುದು ನನ್ನ ಗಮನಕ್ಕೆ ಬಂದಿಲ್ಲ. ತನಿಖೆ ನಿಷ್ಪಕ್ಷಪಾತವಾಗಿ ಆಗಲಿದೆ ಎಷ್ಟೇ ಪ್ರಭಾವಿಗಳು ಇದ್ದರೂ ಶಿಕ್ಷೆ ಆಗಲಿದೆ ಎಂದು ನಾಗೇಂದ್ರ ಹೇಳಿದರು.