– ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ
– ಆರೋಪಿಯನ್ನು ವಶಕ್ಕೆ ಪಡೆದಿದ್ದು ಗುಪ್ತ ಸ್ಥಳದಲ್ಲಿ ವಿಚಾರಣೆ
ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ರಾಯಚೂರಿನಲ್ಲಿ ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ. ನಗರದಲ್ಲಿ ವಿವಿಧ ಸಂಘಟನೆಗಳು ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿವೆ.
ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದರು. ಈಗಾಗಲೇ ಸಿಐಡಿ ಅಧಿಕಾರಿಗಳು ತನಿಖೆ ಆರಂಭಸಿದ್ದಾರೆ. ಯಾವುದೇ ಲೋಪದೋಷಕ್ಕೆ ಅವಕಾಶವಿಲ್ಲ. ತಪ್ಪಿತಸ್ಥರನ್ನು ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಅವಶ್ಯಕತೆಯಿದ್ದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬಹುದು, ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತದೆ ಎಂದು ಸಚಿವ ನಾಡಗೌಡ ಹೇಳಿದ್ದಾರೆ.
ಮೃತ ವಿದ್ಯಾರ್ಥಿನಿ ತಂದೆ ನಾಗರಾಜ್ ಪತ್ತಾರ್ ಮಾತನಾಡಿ, ಪ್ರಕರಣ ಸಿಐಡಿಗೆ ಕೊಟ್ಟಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ನನ್ನ ಮಗಳನ್ನು ಸಾಕಷ್ಟು ಸಾರಿ ಕೇಳಿದರು ಏನೂ ಬಾಯಿ ಬಿಟ್ಟಿರಲಿಲ್ಲ. ಸುದರ್ಶನ್ ಕಿರುಕುಳಕ್ಕೆ ಹೆದರಿ ಅವಳು ಯಾವ ವಿಷಯವನ್ನೂ ಹೇಳಿರಲಿಲ್ಲ. ಯಾವ ಮಗುವಿಗೂ ಇಂತ ಸ್ಥಿತಿ ಬರಬಾರದು. ನ್ಯಾಯ ಸಿಗುವ ಭರವಸೆ ಇದೆ ಎಂದು ಮೃತಳ ತಂದೆ ನಾಗರಾಜ್ ಹೇಳಿದ್ದಾರೆ.
ರಾಯಚೂರು ಜಿಲ್ಲಾ ಕಾರಾಗೃಹದಲ್ಲಿರುವ ಆರೋಪಿ ಸುದರ್ಶನ್ ಯಾದವ್ ನನ್ನು ಸಿಐಡಿ ಅಧಿಕಾರಿಗಳ ತಂಡ ಇಂದು ವಶಕ್ಕೆ ಪಡೆದಿದ್ದು ಗುಪ್ತ ಸ್ಥಳದಲ್ಲಿ ಎರಡು ದಿನ ಕಾಲ ವಿಚಾರಣೆ ನಡೆಸಲಿದೆ. ಸಿಐಡಿ ಎಸ್‍ಪಿ ಶರಣಪ್ಪ ನೇತೃತ್ವದ ತಂಡ ರಾಯಚೂರಿನಲ್ಲೇ ಬೀಡು ಬಿಟ್ಟಿದ್ದು ತನಿಖೆ ಚುರುಕುಗೊಳಿಸಿದೆ.
ನ್ಯಾಯಕ್ಕಾಗಿ ಆಗ್ರಹಿಸಿ ವಿಶ್ವಕರ್ಮ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳು ಗುರುವಾರ ಬೃಹತ್ ಹೋರಾಟಕ್ಕೆ ಸಜ್ಜಾಗಿವೆ. ಸಿನಿಮಾ ನಟರಾದ ಹರ್ಷಿಕಾ ಪೂಣಚ್ಚ, ಭುವನ್ ಸೇರಿದಂತೆ ನಾನಾ ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಲಿದ್ದಾರೆ. ಮೃತದೇಹ ಪತ್ತೆಯಾದ ಮಾಣಿಕ ಪ್ರಭು ದೇವಸ್ಥಾನ ಹಿಂಭಾಗದ ಬೆಟ್ಟದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿಸಲು ಆಗ್ರಹಿಸಲಿದ್ದಾರೆ.