ಬೆಂಗಳೂರು: ಪ್ರತಿ ಬಾರಿಯೂ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿಸುತ್ತಲೇ ಇರುವ ಕೇಂದ್ರ ಸರ್ಕಾರ, ನಾಳಿನ ಆಯವ್ಯಯದಲ್ಲಿ ರಾಜ್ಯದ ಮೇಲೆ ಕರುಣೆ ತೋರುವಂತಾಗಲಿ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಆಗ್ರಹಿಸಿದ್ದಾರೆ.
ಮಾಧ್ಯಮ ಹೇಳಿಕೆಯನ್ನು ನೀಡಿರುವ ಅವರು, ರಾಜ್ಯ ಸರ್ಕಾರವನ್ನು ಮಲತಾಯಿ ಮಕ್ಕಳಂತೆ ಕೇಂದ್ರದ ಬಿಜೆಪಿ ಸರ್ಕಾರ ನಡೆಸಿಕೊಳ್ಳುತ್ತಿದೆ. ಅತಿಹೆಚ್ಚು ತೆರಿಗೆ ಸಂಗ್ರಹವಾಗುವ ರಾಜ್ಯವಾಗಿದ್ದರೂ ನಮಗೆ ದೊರೆಯುವ ಪಾಲು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟಾಗಿದೆ. ನಮ್ಮ ಪಾಲಿನ ತೆರಿಗೆಯನ್ನು ಹೆಚ್ಚಿಸುವಂತೆ ಈಗಾಗಲೇ ಹಲವಾರು ಬಾರಿ ಮುಖ್ಯಮಂತ್ರಿಗಳು ಮನವಿ ಸಲ್ಲಿಸಿದ್ದಾರೆ. ಜಲಸಂಪನ್ಮೂಲ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ರಾಜ್ಯದ ಇಲಾಖೆಗಳ ಮೂಲಕ ಹಲವಾರು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಹಾಗೆಯೇ, ಈಗಾಗಲೇ ವಿವಿಧ ಯೋಜನೆಗಳಿಗೆ ಘೋಷಿಸಲಾಗಿರುವ ಅನುದಾನವನ್ನು ತಕ್ಷಣ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಕರ್ನಾಟಕ ರಾಜ್ಯದ ಬಹಳಷ್ಟು ಜಿಲ್ಲೆಗಳು ಬರಗಾಲ ನೀರಿನ ಲಭ್ಯತೆ ಕಡಿಮೆಯಿದೆ. ಇಲ್ಲಿ ಅಂತರ್ಜಲ ವೃದ್ಧಿಗೆ ಅನುವು ಮಾಡಿಕೊಡುವಂತಹ ಅಟಲ್ ಭೂಜಲ್, ಪಿಎಂಕೆಎಸ್‌ವೈ, ಆರ್‌ಆರ್‌ಆರ್ ನಂತಹ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಸೈನ್ಸ್ ಸಿಟಿ ಸ್ಥಾಪನೆಗೆ ಅಗತ್ಯ ಭೂಮಿಯನ್ನು ನಿಗದಿಗೊಳಿಸಿದ್ದು, ಇದರ ಸ್ಥಾಪನೆಗೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಯಲಯಗಳ ಅಭಿವೃದ್ಧಿಗೆ ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಭಾರತ ಸರ್ಕಾರದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಹಾಗೂ Aspirational District ಆಗಿರುವ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಹಲವಾರು ಪತ್ರಗಳನ್ನು ಬರೆದು ಅಗತ್ಯ ಸಹಾಯ ನೀಡುವ ಭರವಸೆಯನ್ನು ನೀಡಿದ್ದಾರೆ. ಏಮ್ಸ್ ಸ್ಥಾಪನೆಯ ನಿಟ್ಟಿನಲ್ಲಿ ಘೋಷಣೆ ಮಾಡಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.