ಬೆಂಗಳೂರು: ಚಂದ್ರಯಾನ- 3ರ (Chandrayaan-3) ಇಂದಿನ ಯಶಸ್ವಿ ಉಡಾವಣೆಯ ಮೂಲಕ ಚಂದ್ರನ ಅನ್ವೇಷಣೆಯಲ್ಲಿ ವಿಶ್ವದಲ್ಲೇ ಮತ್ತೊಂದು ವಿಶಿಷ್ಟ ಮೈಲುಗಲ್ಲನ್ನು ಇಸ್ರೋ ನೆಟ್ಟಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್ ಭೋಸರಾಜು ( N. S. Boseraju) ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಮೆರಿಕದ 1 ನಿರ್ಧಾರ – ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿಯಾದ ಭಾರತ
ಇಂದು ಚಂದ್ರಯಾನ- 3 ರ ಉಡಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಿರಂತರ ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಯ ಮೂಲಕ ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತ ದೇಶ ವಿಶ್ವದಲ್ಲೇ ಮುಂಚೂಣಿ ಸ್ಥಾನ ಹೊಂದುವಲ್ಲಿ ಇಸ್ರೋ ಕೊಡುಗೆ ಅಪಾರ. ಚಂದ್ರಯಾನ- 1 ಮತ್ತು 2 ರ ಯಶಸ್ವಿ ಕಾರ್ಯಾಚರಣೆಗಳಿಂದ ಇಸ್ರೋ ಸಂಸ್ಥೆ ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಕನಸನ್ನು ಕಾಣಲು ಅನುವು ಮಾಡಿಕೊಟ್ಟಿದೆ. ಇಂದಿನ ಈ ಯಶಸ್ವಿ ಕಾರ್ಯಾಚರಣೆ ವಿಶ್ವದ ಚಂದ್ರನ ಅನ್ವೇಷಣೆಯ ಕ್ಷೇತ್ರದಲ್ಲಿ ವಿಶೇಷ ಮೈಲುಗಲ್ಲನ್ನು ಸಾಧಿಸಿದೆ. ಮುಂದಿನ ದಿನಗಳಲ್ಲಿ ಚಂದ್ರನ ಮಣ್ಣಿನ ಮಾದರಿಗಳನ್ನು ಸಮರ್ಥವಾಗಿ ಮರಳಿ ತರುವ ಮೂಲಕ, ಚಂದ್ರನ ಮೇಲ್ಮೈನ ನಮ್ಮ ತಿಳುವಳಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಅನುವು ಮಾಡಿ ಕೊಡಲಿದೆ ಎಂದರು.
ಚಂದ್ರಯಾನ- 3 ರ ಯಶಸ್ಸನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಗಳು ಕೈಗೊಂಡ ತಾಂತ್ರಿಕ ಪ್ರಗತಿ ಮತ್ತು ಅಂತರರಾಷ್ಟ್ರೀಯ ಸಹಯೋಗಗಳು ಶ್ಲಾಘನೀಯ. ಇಂತಹ ಬದ್ಧತೆ ಮತ್ತು ನಿರಂತರ ಸಾಧನೆ ಭಾರತ ದೇಶವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದುಕೊಳ್ಳಲು ಅನುವು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
Web Stories