ಚಾಮರಾಜನಗರ: ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಅಮ್ಮ ಭಗವಾನ್ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಳ್ಳೇಗಾಲ ಮತಕ್ಷೇತ್ರದಿಂದ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ಮಹೇಶ್ ಅವರು ಗೆಲುವು ಸಾಧಿಸಿ ಸಚಿವರಾಗಿದ್ದಾರೆ. ಎನ್.ಮಹೇಶ್ ಅವರು ಕೆಲವು ದಿನಗಳ ಹಿಂದಷ್ಟೇ ಸುತ್ತೂರು ಶ್ರೀಗಳ ಕಾಲಿಗೆ ಬಿದ್ದು ನಮಸ್ಕರಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದರು. ಇದರ ಬೆನ್ನಲ್ಲೆ ಈಗ ಅಮ್ಮ ಭಗವಾನ್ ಎಂಬ ಸ್ವಾಮೀಜಿಯ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
Advertisement
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ, ಭಾರೀ ಪ್ರಮಾಣದ ಟೀಕೆಗಳು ಕೇಳಿಬರುತ್ತಿದ್ದು, ಈ ಕುರಿತು ಅಂಬೇಡ್ಕರ್‍ವಾದಿಗಳು ಅಸಮಾಧಾನ ವ್ಯಕ್ತಡಿಸಿದ್ದಾರೆ. ಅಂಬೇಡ್ಕರ್ ವಿಚಾರಧಾರೆಯನ್ನು ಊರೆಲ್ಲ ಹರಡಿ, ಈಗ ಅವರ ಸ್ವಾಭಿಮಾನವನ್ನು ಹರಾಜು ಹಾಕುವ ಕೃತ್ಯವನ್ನು ಎನ್.ಮಹೇಶ್ ಮಾಡುತ್ತಿದ್ದಾರೆ. ಅಂಬೇಡ್ಕರ್ ಸ್ವಾಭಿಮಾನದ ಚಿಂತನೆಯನ್ನು ಸ್ವಾಮೀಜಿ ಚಪ್ಪಲಿ ತಳಕ್ಕಿಟ್ಟಿದ್ದು, ಬಿಎಸ್‍ಪಿ ಹಾಗೂ ಅಂಬೇಡ್ಕರಿಸಮ್ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಬೆಂಬಲಿಗರು ಕಮೆಂಟ್ ಮಾಡುತ್ತಿದ್ದಾರೆ.
Advertisement
https://youtu.be/jg2vq0ZAyTc
Advertisement
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎನ್ ಮಹೇಶ್, ಚುನಾವಣೆ ಪ್ರಚಾರಕ್ಕಾಗಿ ಕೊಳ್ಳೇಗಾಲಕ್ಕೆ ಹೋಗಿದ್ದೆ. ಈ ವೇಳೆ ಸ್ಥಳೀಯರು ನೀವು ಪೂಜೆ ಮಾಡಿ ಒಳ್ಳೆದಾಗುತ್ತದೆ ಎಂದು ಹೇಳಿದರು. ಅವರ ಮನಸ್ಸಿಗೆ ಧಕ್ಕೆ ತರಬಾರದು ಎನ್ನುವುದಕ್ಕೆ ನಾನು ಪಾದ ಪೂಜೆ ಮಾಡಿದ್ದು ಸತ್ಯ. ಆದರೆ ನಾವು ಯಾವುದೇ ಧರ್ಮಕ್ಕೆ ಸೇರಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಉಳಿದ ಧರ್ಮಗಳನ್ನು ಗೌರವಿಸಬೇಕಾಗುತ್ತದೆ. ನಾನು ಚರ್ಮಕ್ಕೆ ಪಾದರಕ್ಷೆ ಮುಟ್ಟಿಸಿಕೊಂಡಿಲ್ಲ, ಬಟ್ಟೆಗೆ ಮುಟ್ಟಿಸಿಕೊಂಡಿರುವೆ. ನಾನು ಅಂಬೇಡ್ಕರ್ ಸಿದ್ಧಾಂತಗಳಿಗೆ ಧಕ್ಕೆ ತಂದಿದ್ದೇನೆ ಎಂದು ಕೆಲವರು ದೂರಿದ್ದಾರೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ. ನಾನು ಕಟ್ಟಾ ಅಂಬೇಡ್ಕರ್‍ವಾದಿ ಎಂದಿದ್ದಾರೆ.